ಬೆಂಗಳೂರು: ‘ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಸಣ್ಣ ವಿಚಾರಕ್ಕೆ ಹಗುರವಾಗಿ ಟೀಕಿಸಲಾಗುತ್ತಿದೆ. ಈ ವಿಚಾರದಲ್ಲಿ ಮಿತವಾಗಿ ಮಾತನಾಡದೇ ಇದ್ದರೆ ಟೀಕಿಸುವವರನ್ನೇ ಜನರು ಧ್ವಂಸ ಮಾಡುತ್ತಾರೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತ್ಯ ಸಂಗಮ ಟ್ರಸ್ಟ್‌ನ ದಶಮಾನೋತ್ಸವ ಹಾಗೂ ಒಕ್ಕಲಿಗರ ವಾಯ್ಸ್ ಮಾಸಪತ್ರಿಕೆಯ 4ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಯನ್ನು ನಾನು ಗಮನಿಸುತ್ತಿದ್ದೇನೆ’ ಎಂದು ಹೇಳಿದರು.
‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಅವರ ಎದುರೇ ಕೆಲವು ವಿಚಾರ ಹಂಚಿಕೊಳ್ಳಲು ನಾನು ಇಚ್ಛಿಸಿದ್ದೆ. ಯಾವುದೇ ವಿಚಾರದಲ್ಲೂ ದೇವೇಗೌಡ ಅವರು ಆಳವಾಗಿ ಅಧ್ಯಯನ ನಡೆಸಿಯೇ ಮಾತನಾಡುತ್ತಾರೆ. ಅವರಿಗೆ ಇನ್ನೂ ಯಾಕೆ ಭಾರತರತ್ನ ಗೌರವ ನೀಡಿಲ್ಲ? ಅವರು ಅರ್ಹರು ಅಲ್ಲವೇ ಎಂದು ಪ್ರಶ್ನಿಸಿದರು. ‘ಭಾರತರತ್ನ ನೀಡುವಂತೆ ಪ್ರಧಾನಿ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ’ ಎಂದರು.
ಎನ್‌ಆರ್‌ಐ ಫೋರಂ ಉಪಾಧ್ಯಕ್ಷೆ ಆರತಿ ಕೃಷ್ಣ ಮಾತನಾಡಿ, ‘ಅನಿವಾಸಿ ಕನ್ನಡಿಗರಿಗೆ ಹೊಸ ಸಚಿವಾಲಯ ಸ್ಥಾಪಿಸುವ ಪ್ರಯತ್ನಗಳು ಸಾಗುತ್ತಿವೆ’ ಎಂದು ಹೇಳಿದರು.
ಜಲಸಾರಿಗೆ ಇಲಾಖೆ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, ‘₹100 ಕೋಟಿ ಮೊತ್ತದ ಸಾಂಸ್ಕೃತಿಕ ನಿಧಿ ಸ್ಥಾಪಿಸಿ ಅದರಲ್ಲಿ ಸಂಸ್ಕೃತಿ ಉಳಿಸುವ ಕೆಲಸದಲ್ಲಿ ತೊಡಗಿರುವ ಸಂಘ ಸಂಸ್ಥೆಗಳಿಗೆ ನೆರವು ನೀಡಬಹುದು’ ಎಂದು ಸಲಹೆ ನೀಡಿದರು.
ಅದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕರಾದ ಪುಟ್ಟಸ್ವಾಮಿಗೌಡ, ಎಂ.ಕೃಷ್ಣಪ್ಪ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಇದ್ದರು.
ಇದೇ ವೇಳೆ ಎಸ್.ನಾಗಭೂಷಣ್ ಸಂಪಾದಕತ್ವದ ‘ಮಣ್ಣಿನ ಮಕ್ಕಳ ಬದುಕಿನ ಹಣತೆ’ ಸಂಪುಟ–4, ಮಾಲಿನಿ ಗೋಯಲ್ ಹಾಗೂ ಪ್ರಶಾಂತ್ ಪ್ರಕಾಶ್ ಅವರ ‘ಅನ್ ಬಾಕ್ಸಿಂಗ್ ಬೆಂಗಳೂರು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಒಕ್ಕಲಿಗ ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.