ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿನಗರದ ಕೋವಿಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಜೆಪಿ ಪ್ರಚಾರದ ಬೋರ್ಡ್ ಹಾಕಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಜನರ ಹಣ, ಸರ್ಕಾರಿ ಆಸ್ಪತ್ರೆ, ಆದರೆ ಪ್ರಚಾರ ಮಾತ್ರ ಬಿಜೆಪಿಯದ್ದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಬೆಂಗಳೂರಿನ ಯಶವಂತಪುರದ ಕೋವಿಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಜೆಪಿ ಪ್ರಚಾರದ ಬೋರ್ಡ್ ಹಾಕಿದ್ದೇಕೆ‘ ಎಂದು ಪ್ರಶ್ನಿಸಿದೆ.
ಇದು ಅಧಿಕಾರ ದುರ್ಬಳಕೆ ಅಲ್ಲದೆ ಇನ್ನೇನು? ನೈತಿಕತೆ ಇದ್ದರೆ ಕೂಡಲೇ ಇದನ್ನು ತೆರವುಗೊಳಿಸಿ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
’ಚುನಾವಣೆಗಾಗಿ ಕರ್ನಾಟಕದತ್ತ ಮುಖ ಮಾಡುತ್ತಿರುವ ಮೋದಿ - ಶಾ ಜೋಡಿ ಕರ್ನಾಟಕ ಸಂಕಷ್ಟ ಎದುರಿಸುತ್ತಿದ್ದಾಗ ನಾಪತ್ತೆಯಾಗಿದ್ದರು.
’ಕಷ್ಟಕ್ಕೆ ಬರಬೇಡ, ಚುನಾವಣೆಗೆ ಮಾತ್ರ ಬಿಡಬೇಡ‘ ಎಂಬಂತಿದೆ ಅವರ ನಡೆ. ಮಂಡ್ಯದಲ್ಲಿ ರೈತರು ಹಲವು ದಿನಗಳಿಂದ ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟಿಸುತ್ತಿದ್ದಾರೆ, ಬಿಜೆಪಿಗೆ ನೈಜ ಕಾಳಜಿ ಇದ್ದರೆ ಅವರ ಬಳಿ ಹೋಗಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
’ಚುನಾವಣೆಗಾಗಿ ಕರ್ನಾಟಕದ ಕಡೆ ’ದಂಡ‘ಯಾತ್ರೆ ಕೈಗೊಂಡಿದ್ದಾರೆ ಬಿಜೆಪಿಯ ದೆಹಲಿ ನಾಯಕರು, ಗಡಿ ವಿವಾದ ಬಗೆಹರಿಸಲಾಗದ ಅಮಿತ್ ಶಾ ಅವರ ಮಾತಿಗೆ ಮಹಾರಾಷ್ಟ್ರ ಕಿಮ್ಮತ್ತು ನೀಡುತ್ತಿಲ್ಲ. ಈ ಕಿಮ್ಮತ್ತಿಲ್ಲದ ವ್ಯಕ್ತಿಗೆ ಕರ್ನಾಟಕದ ಜನತೆ ಬೆಲೆ ಕೊಡುವುದು ಅಸಂಭವ. ಬಿಜೆಪಿ ಅದೆಷ್ಟೇ ಸರ್ಕಸ್ ನಡೆಸಿದರೂ ಜನರ ತಿರಸ್ಕಾರ ಎದುರಿಸುವುದು ನಿಶ್ಚಿತ‘ ಎಂದು ಕಾಂಗ್ರೆಸ್ ಕಿಡಿಕಾರಿದೆ.
'ಹಿಂದಿನ ಜನ ಸಂಕಲ್ಪ ಯಾತ್ರೆಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಈಗ ಅಮಿತ್ ಶಾ ಎದುರು ಮಾನ ಉಳಿಸಿಕೊಳ್ಳಲು ಕುರ್ಚಿಗಳಿಗಷ್ಟೇ ಅಲ್ಲ ಕುರ್ಚಿ ಮೇಲೆ ಕೂರುವವರಿಗೂ ಹಣ ಕೊಟ್ಟು ಕರೆಸಿದೆ. ಬಿಜೆಪಿಗರೇ ಈ ಹಣ ಯಾವುದು ಶೇ 40ರಷ್ಟು ಕಮಿಷನ್ ಲೂಟಿಯದ್ದೇ? ಹುದ್ದೆಗಳ ಮಾರಾಟದ ಸಂಪಾದನೆಯೇ? ಮಂತ್ರಿಗಿರಿ ಮಾರಾಟದಿಂದ ಬಂದ ಹಣವೇ?‘ ಎಂದು ಕಾಂಗ್ರೆಸ್ ಟೀಕಿಸಿದೆ.
’ಭ್ರಷ್ಟ ಬಿಜೆಪಿಯ ಶೇ 40ರಷ್ಟು ಕಮಿಷನ್ ಲೂಟಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಸಾಲ ಮಾಡಿ ಕಾಮಗಾರಿಗೆ ಹಣ ಹೂಡಿದ್ದ ಗುತ್ತಿಗೆದಾರ ಪ್ರಸಾದ್ ಭ್ರಷ್ಟ ಬಿಜೆಪಿ ಸರ್ಕಾರದ ಕಮಿಷನ್ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಅಮಿತ್ ಶಾ ಅವರೇ, ರಾಜ್ಯದ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸುವ, ಶೇ 40ರಷ್ಟು ಕಮಿಷನ್ ವಿರುದ್ದ ಕ್ರಮ ಕೈಗೊಳ್ಳುವ ದಮ್ಮು, ತಾಕತ್ತು ಇದೆಯೇ? ಎಂದು ಕಾಂಗ್ರೆಸ್ ಕಿಚಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.