ಬೆಂಗಳೂರು: ದಾಖಲೆಯ ಮಳೆ ಸುರಿದ ಪರಿಣಾಮ ಬೆಂಗಳೂರಿನಲ್ಲಿ ಜನರು ಸಂಕಷ್ಟಕ್ಕೆ ಒಳಗಾಗಿರುವುದರ ನಡುವೆಯೇ ಸಂಸದ ತೇಜಸ್ವಿ ಸೂರ್ಯ ಅವರು ದೋಸೆ ಫೋಟೊ ನೋಡಿ ಹೋಟೆಲ್‌ಗೆ ಭೇಟಿ ನೀಡಿರುವುದು ಅನೇಕರ ಕಣ್ಣು ಕೆಂಪಾಗುವಂತೆ ಮಾಡಿದೆ.
ತೇಜಸ್ವಿ ಸೂರ್ಯ ಹೋಟೆಲ್‌ಗೆ ಭೇಟಿ ನೀಡಿರುವ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮತಿ (ಬುದ್ಧಿ) ದೋಷ ಇರುವವರನ್ನು ಆಯ್ಕೆ ಮಾಡಿದರೆ, ಜನ ಮುಳುಗುವಾಗ ‘ದೋಸೆ’ ತಿನ್ನಲು ಹೋಗುತ್ತಾರೆ! ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ!’ ಎಂದು ವಾಗ್ದಾಳಿ ನಡೆಸಿದೆ.
ಮಕ್ಕಳಾಟ ಆಡಿಕೊಂಡಿದ್ದ ಅಪ್ರಬುದ್ಧರನ್ನು ಸಂಸದರನ್ನಾಗಿಸಿದರೆ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಸಂಸದ ಹೋಟೆಲ್‌ವೊಂದರ ಪ್ರಚಾರ ಮಾಡುತ್ತಾ, ದೋಸೆಯ ರುಚಿಯನ್ನು ಸವಿಯುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೇಜಸ್ವಿ ಸೂರ್ಯ ಅವರ ನಡೆಯನ್ನು ಪ್ರತಿಪಕ್ಷಗಳು ಟೀಕಿಸಿವೆ.
ವಿಡಿಯೊದಲ್ಲಿ ಏನಿದೆ?
‘ಈಗ ನಾನು ಪದ್ಮನಾಭ ನಗರದ ಸಾತ್ವಿ ಕಿಚನ್‌ಗೆ ಬಂದಿದ್ದೆ. ಇನ್‌ಸ್ಟಾಗ್ರಾಮ್‌ನಲ್ಲಿ ದೋಸೆಯ ಫೋಟೊ ನೋಡಿ ಟೆಂಪ್ಟ್ ಆಗಿ ಇಲ್ಲಿಗೆ ಬಂದಿದ್ದೇನೆ. ಬೆಣ್ಣೆ ಮಸಾಲೆ ತುಂಬಾ ಚೆನ್ನಾಗಿದೆ. ನೀವೂ ಬನ್ನಿ. ತಿಂದಾಗ್ಲೇನೆ ಆಸ್ವಾದನೆ ನಿಮಗೆ ಗೊತ್ತಾಗುವುದು. ಉಪ್ಪಿಟ್ಟು ಬಹಳ ಚೆನ್ನಾಗಿದೆ. ಬನ್ನಿ' ಎಂದು ತೇಜಸ್ವಿ ಸೂರ್ಯ ಜನರನ್ನು ಆಹ್ವಾನಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.