ಬೆಂಗಳೂರು: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ ಹಲವು ಪ್ರದೇಶಗಳು ಅಸ್ತವ್ಯಸ್ತಗೊಂಡವು. ಅಪಾರ್ಟ್‌ಮೆಂಟ್‌ಗಳು, ಮನೆಗಳು ಜಲಾವೃತಗೊಂಡವು. ಕಾಂಪೌಂಡ್‌ಗಳು ಕುಸಿದು ಬಿದ್ದವು. ಮರಗಳು ಉರುಳಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಸಮರ್ಪಕ ಚರಂಡಿ ಇಲ್ಲದೇ ಹಲವು ಕಡೆಗಳಲ್ಲಿ ರಸ್ತೆಗಳೇ ಕಾಲುವೆಗಳಂತಾದವು.
ಪಶ್ಚಿಮ ವಲಯದಲ್ಲಿ ಬಿನ್ನಿಪೇಟೆ ಬಳಿ ಪಾರ್ಕ್ ವ್ಯೂವ್ ಅಪಾರ್ಟ್‌ಮೆಂಟ್‌ನ 7 ಅಡಿ ಎತ್ತರದ ಕಾಂಪೌಂಡ್ ಸುಮಾರು 10 ಅಡಿ ಉದ್ದದಷ್ಟು ಕುಸಿದು ಬಿದ್ದಿದೆ. ಇದರಿಂದ ಹಲವು ವಾಹನಗಳಿಗೆ ಹಾನಿಯಾಗಿದೆ. ಪಾಲಿಕೆ ಸಿಬ್ಬಂದಿ ಮತ್ತು ಅಪಾರ್ಟ್‌ಮೆಂಟ್ ಸಿಬ್ಬಂದಿ ಸೇರಿ ಕಾಂಪೌಂಡ್‌ನ ಭಗ್ನಾವಶೇಷಗಳನ್ನು ಭಾನುವಾರ ತೆರವುಗೊಳಿಸಿದರು.
ಇಟಿಎ ಮಾಲ್ ಬಳಿ ಕಾಪೌಂಡ್ ಕುಸಿದಿದ್ದು, ಅವಶೇಷಗಳನ್ನು ತೆರವುಗೊಳಿಸಿ ನಿವಾಸಿಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಯಿತು. ಮಲ್ಲೇಶ್ವರ 8ನೇ ಅಡ್ಡರಸ್ತೆ ಕುಸಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಅಪಾರ್ಟ್‌ಮೆಂಟ್ ಜಲಾವೃತ: ಯಲಹಂಕ ವಲಯದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಸುಮಾರು 50 ಅಡಿ ಉದ್ದದಷ್ಟು ಕುಸಿದು ಬಿದ್ದಿದ್ದರಿಂದ ಅಲ್ಲಿನ ವಾಹನ ಪಾರ್ಕಿಂಗ್ ಸ್ಥಳಕ್ಕೆ ನೀರು ನುಗ್ಗಿತು. ಇದರಿಂದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಹೊರಬರಲಾರದಂಥ ಜಲದಿಗ್ಬಂಧನ ಉಂಟಾಯಿತು. ನಾಲ್ಕು ಅಡಿಗಿಂತಲೂ ಹೆಚ್ಚು ಇದ್ದ ನೀರನ್ನು ಪಾಲಿಕೆಯ ಗ್ಯಾಂಗ್‌ಮನ್ ತಂಡ, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಅಗ್ನಿಶಾಮಕ ತಂಡಗಳ ಸದಸ್ಯರು ಪಂಪ್‌ಗಳ ಮೂಲಕ ಹೊರಹಾಕಿದರು.
ಯಲಹಂಕ ಕೆರೆಗೆ ಸುತ್ತಲಿನ 10 ಕೆರೆಗಳಿಂದ ನೀರು ಬರುತ್ತದೆ. ಇಲ್ಲಿಂದ ಜಕ್ಕೂರು ಕೆರೆಗೆ ನೀರು ಹರಿಯುತ್ತದೆ. ಯಲಹಂಕ ಕೆರೆಯ ಮಟ್ಟದಿಂದ 25 ಅಡಿ ತಗ್ಗಿನಲ್ಲಿ ಅಪಾರ್ಟ್‌ಮೆಂಟ್ ಇದ್ದು, ಅದರ ಆವರಣ ಗೋಡೆ ಕುಸಿದಿರುವ ಕಾರಣ ನೀರು ನುಗ್ಗಿದೆ. ಗೋಡೆ ಕುಸಿದಿರುವ ಭಾಗದಲ್ಲಿ ಮರಳು ಚೀಲಗಳನ್ನು ಜೋಡಿಸಲಾಗುತ್ತಿದೆ. ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ಉಪಾಹಾರ ಮತ್ತು ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಯಲಹಂಕ ವಲಯದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು.
ಬಿಬಿಎಂಪಿ ದಕ್ಷಿಣ ವಲಯದ ವ್ಯಾಪ್ತಿಯಲ್ಲಿನ ವಿಜಯನಗರದ ಮಧುವನದ ಬಳಿ ರಾಜಕಾಲುವೆಯ ಬಳಿಯಿದ್ದ ಒಳಚರಂಡಿ ಉಕ್ಕಿ ಹರಿದ ಕಾರಣ 10 ಮನೆಗಳಿಗೆ ನೀರು ನುಗ್ಗಿದೆ. ನಿವಾಸಿಗಳು ಮನೆಯಿಂದ ನೀರು ಹೊರಹಾಕಲು ಪರದಾಡಿದರು.
ವೃದ್ಧಾಶ್ರಮಕ್ಕೆ ನುಗ್ಗಿದ ನೀರು:
ಬಸವೇಶ್ವರನಗರದಲ್ಲಿ ಇರುವ ವೃದ್ಧಾಶ್ರಮಕ್ಕೆ ನೀರು ನುಗ್ಗಿದ್ದರಿಂದ ಅಲ್ಲಿದ್ದ 15ಕ್ಕೂ ಅಧಿಕ ವೃದ್ಧರು ಪರದಾಡಿದರು. ಬಸವೇಶ್ವರ ನಗರದ 8ಬಿ ಮುಖ್ಯರಸ್ತೆ ಹೊಳೆಯಂತಾಯಿತು. ಪ್ಲೈವುಡ್ ಹಾಗೂ ಗ್ಲಾಸ್ ಅಂಗಡಿಗಳು ಜಲಾವೃತಗೊಂಡವು.
ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಯಲಹಂಕ ವಲಯ, ಪಶ್ಚಿಮ ವಲಯ ಹಾಗೂ ದಕ್ಷಿಣ ವಲಯಗಳಲ್ಲಿ ತೀವ್ರ ಮಳೆಯಾಗಿದ್ದು, ಉಳಿದ ಐದು ವಲಯಗಳಲ್ಲಿ ಸಾಧಾರಣ ಮಳೆ ಸುರಿದಿದೆ.
ಮುರಿದು ಬಿದ್ದ 15 ಮರ 44 ಕೊಂಬೆ
ಎಚ್.ಎಸ್.ಆರ್. ಲೇಔಟ್ ಚೋಳೂರು ಪಾಳ್ಯ ಮಲ್ಲೇಶ್ವರ 8ನೇ ಮುಖ್ಯರಸ್ತೆ ಜಯನಗರ ಜೀವನ್‌ಬಿಮಾ ನಗರ ಜಾಲಹಳ್ಳಿಯ ಬಿಡಬ್ಲ್ಯುಎಸ್‌ಎಸ್‌ಬಿ ಪೈಪ್‌ಲೈನ್ ರಸ್ತೆ ಸಹಿತ 49 ಪ್ರದೇಶಗಳಲ್ಲಿ ಮರ ಮತ್ತು ಕೊಂಬೆಗಳು ಧರೆಗೆ ಉರುಳಿವೆ. 15 ಮರಗಳು ಹಾಗೂ 44 ಮರದ ರೆಂಬೆ-ಕೊಂಬೆಗಳು ಬಿದ್ದಿರುವುದು ಪಾಲಿಕೆಯ ಲೆಕ್ಕಕ್ಕೆ ಸಿಕ್ಕಿದೆ. ಪಾಲಿಕೆಯ ನಿಯಂತ್ರಣ ಕೊಠಡಿ ತಂಡಗಳು ಹಾಗೂ ಮರ ತೆರವು ತಂಡಗಳು ಮರ ರೆಂಬೆಗಳನ್ನು ತೆರವುಗೊಳಿಸಿದವು.
ಕಾಲುವೆಯಂತಾದ ರಸ್ತೆಗಳು
ಕೆ.ಆರ್ ಮಾರುಕಟ್ಟೆಯಲ್ಲಿ ನೀರು ನುಗ್ಗಿ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಯಿತು. ಖೋಡೆ ಜಂಕ್ಷನ್ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದರಿಂದ ಮೆಜೆಸ್ಟಿಕ್ ಮತ್ತು ರಾಜಾಜಿನಗರದ ಕಡೆಗೆ ಹೋಗುವ ವಾಹನಗಳಿಗೆ ತೊಡಕಾಯಿತು. ಸ್ಯಾಂಕಿ ರಸ್ತೆ ಬಳಿ ಮಳೆ ನೀರು ನಿಂತದ್ದರಿಂದ ಮಲ್ಲೇಶ್ವರ 18ನೇ ಅಡ್ಡರಸ್ತೆ ಕಡೆಗೆ ಹೋಗುವ ವಾಹನಗಳ ಸವಾರರು ಪರದಾಡಿದರು. ಬಿಡಿಎ ಜಂಕ್ಷನ್ ಬಳಿ ಮಳೆ ನೀರು ನಿಂತ ಕಾರಣ ಬಳ್ಳಾರಿ ರಸ್ತೆ ಕಡೆಗೆ ಹೋಗಲು ತೊಂದರೆಯಾಯಿತು.
ಎಎಸ್‌ಆರ್ ಸ್ಟ್ರೀಟ್ ಬಳಿ ಸಂಪಿಗೆ ರಸ್ತೆ ಅರೆಕೆರೆ ಅಂಚಪ್ಪ ಗಾರ್ಡನ್ ಹೆಬ್ಬಾಳ ಪಿಎಸ್ ಬಳಿ ವಿಶ್ವವಿದ್ಯಾಲಯದ ಜ್ಞಾನಭಾರತಿ ಗೇಟ್ ಬಳಿ ಪಣತ್ತೂರು ಹುಣಸೆಮಾರೇನಹಳ್ಳಿ ಬಳಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಮಲ್ಲೇಶ್ವರ ಶಾಂತಿನಗರ ರಾಜಾಜಿನಗರ ವೈಟ್ಫೀಲ್ಡ್ ಮೆಜೆಸ್ಟಿಕ್ ಸಹಿತ ಅನೇಕ ಪ್ರದೇಶಗಳಲ್ಲಿ ರಸ್ತೆಯಲ್ಲೇ ನೀರು ಹರಿಯಿತು.
5 ಸೆಂಟಿ ಮೀಟರ್‌ಗಿಂತ ಅಧಿಕ ಮಳೆ ಸುರಿದ ಪ್ರದೇಶಗಳು
ಪ್ರದೇಶ : ಮಳೆ ಪ್ರಮಾಣ (ಸೆಂ.ಮೀ.)
ಕೊಟ್ಟಿಗೆಪಾಳ್ಯ : 11.3
ಗಾಳಿ ಆಂಜನೇಯ ದೇವಸ್ಥಾನ :10.8
ಹಂಪಿನಗರ :10.8
ನಾಗಪುರ :10.7
ಅಟ್ಟೂರು : 7.9
ಕೆಂಪೇಗೌಡ ನಿಲ್ದಾಣ :7.9
ಚೌಡೇಶ್ವರಿ ನಗರ : 7.9
ನಾಗರಬಾವಿ : 7.5
ಮಾರುತಿ ಮಂದಿರ : 7.5
ನಂದಿನಿ ಲೇಔಟ್ : 7.5
ಮಾರಪ್ಪನಪಾಳ್ಯ : 7.1
ಎಚ್‌ಎಂಟಿ : 7.1
ಅಗ್ರಹಾರ ದಾಸರಹಳ್ಳಿ : 5.9
ರಾಜಾಜಿನಗರ : 5.9
ವಿದ್ಯಾರಣ್ಯಪುರ : 5.6
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.