ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಬುಧವಾರ ಸಂಜೆ ಬಿರುಸಿನ ಮಳೆ ಸುರಿಯಿತು. ಹಲವು ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಹೆಬ್ಬಾಳ ಪೊಲೀಸ್ ಠಾಣೆ ಬಳಿಯ ರಸ್ತೆಗಳಲ್ಲಿ ಹೆಚ್ಚಿನ ನೀರು ನಿಂತಿದ್ದರಿಂದ ವಿಮಾನ ನಿಲ್ದಾಣದ ಕಡೆಗೆ ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ಸಂಜೆ ಆರಂಭವಾದ ಮಳೆ ಹಲವು ಪ್ರದೇಶಗಳಲ್ಲಿ ಮಧ್ಯರಾತ್ರಿಯವರೆಗೂ ಮುಂದುವರಿದಿತ್ತು.
ಸಂಜಯನಗರ ಕ್ರಾಸ್, ಕಸ್ತೂರಿನಗರ ಡೌನ್ ರ‍್ಯಾಂಪ್, ಜಯಮಹಲ್ ರಸ್ತೆ, ವೀರಣ್ಣ ಪಾಳ್ಯ, ಕ್ವೀನ್ಸ್ ಜಂಕ್ಷನ್, ಅನಿಲ್ ಕುಂಬ್ಳೆ ವೃತ್ತ, ನಾಗವಾರ ಜಂಕ್ಷನ್, ಟ್ಯಾನರಿ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶದ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು. ಸಂಜೆ ವೇಳೆ ವಾಹನಗಳು ಹೆಚ್ಚಾಗಿದ್ದರಿಂದ, ಸಂಚಾರ ನಿಧಾನಗತಿಯಲ್ಲಿತ್ತು.
ಮರ ಬಿದ್ದು ವಾಹನ ಜಖಂ:
ಅಲಿ ಅಸ್ಕರ್ ರಸ್ತೆಯಲ್ಲಿ ಮರ ಬಿದ್ದು, ಎರಡು ಕಾರು ಹಾಗೂ ಒಂದು ಆಟೊ ಜಖಂಗೊಂಡವು. ಇದರಿಂದಾಗಿ ಈ ಮಾರ್ಗದಲ್ಲಿ ದೀರ್ಘ ಕಾಲ ವಾಹನ ದಟ್ಟಣೆ ಉಂಟಾಗಿತ್ತು. ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದರು. ಈ ರಸ್ತೆಗೆ ಪರ್ಯಾಯವಾಗಿ ಎಲ್‌ಆರ್‌ಡಿಇ ರಸ್ತೆಯಲ್ಲಿ ಸಂಚಾರಕ್ಕೆ ಸಂಚಾರ ಪೊಲೀಸರು ಅನುವು ಮಾಡಿಕೊಟ್ಟರು.
ಕೊಡಿಗೆಹಳ್ಳಿ, ಚೌಡೇಶ್ವರಿ ವಾರ್ಡ್, ಯಲಹಂಕ, ಬಸವೇಶ್ವರನಗರ, ವನ್ನಾರ್‌ಪೇಟೆ, ನಾಗಪುರ, ಕೊನೇನ ಅಗ್ರಹಾರ, ನಂದಿನಿ ಲೇಔಟ್, ದೊಡ್ಡನೆಕ್ಕುಂದಿ, ಎಚ್‌ಎಎಲ್ ವಿಮಾನ ನಿಲ್ದಾಣ, ಮಾರತ್‌ಹಳ್ಳಿ, ವಿದ್ಯಾರಣ್ಯಪುರ, ವಿ. ನಾಗೇನಹಳ್ಳಿ ಸುತ್ತಮುತ್ತ ಮೂರು ಸೆಂ.ಮೀಟರ್‌ನಷ್ಟು ಮಳೆಯಾಗಿದೆ.
ಕೋರಮಂಗಲ, ಮಾರುತಿಮಂದಿರ, ಪೀಣ್ಯ ಕೈಗಾರಿಕೆ ಪ್ರದೇಶ, ಜಕ್ಕೂರು, ವಿದ್ಯಾಪೀಠ, ಪುಲಕೇಶಿನಗರ, ಸಂಪಂಗಿರಾಮನಗರ, ಬಾಣಸವಾಡಿ, ಶೆಟ್ಟಿಹಳ್ಳಿ, ಹೇರೋಹಳ್ಳಿ, ವಿಶ್ವೇಶ್ವರಪುರ, ಎಚ್‌ಎಸ್‌ಆರ್ ಲೇಔಟ್, ಕಾಟನ್ ಪೇಟೆ, ಹೊರಮಾವು, ಹೊಯ್ಸಳನಗರ, ಹಂಪಿನಗರ, ಬಿಟಿಎಂ ಲೇಔಟ್, ರಾಜಮಹಲ್ ಗುಟ್ಟಹಳ್ಳಿ, ಬಾಗಲಗುಂಟೆ, ಬೆಳ್ಳಂದೂರು, ರಾಮಮೂರ್ತಿನಗರದ ಸುತ್ತಮುತ್ತ ಪ್ರದೇಶದಲ್ಲಿ ಎರಡು ಸೆಂ.ಮೀನಷ್ಟು ಮಳೆಯಾಗಿದೆ.
ನಾಯಂಡಹಳ್ಳಿ, ಕೆಂಗೇರಿ, ರಾಜರಾಜೇಶ್ವರಿನಗರ, ವಿಜ್ಞಾನನಗರ, ಜ್ಞಾನಭಾರತಿ, ಅರೆಕರೆ, ದೊಡ್ಡಬಿದರಕಲ್ಲು, ದೊರೆಸಾನಿಪಾಳ್ಯ, ರಾಜಾಜಿನಗರ, ಮನೋರಾಯನಪಾಳ್ಯ, ಗೊಟ್ಟಿಗೆರೆ, ಹಗದೂರು ಸುತ್ತಮುತ್ತ ಒಂದು ಸೆಂ.ಮೀಟರ್‌ಗೂ ಹೆಚ್ಚಿನ ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.