ADVERTISEMENT

ಮತ್ತೆ ದ್ರಾವಿಡ ಚಳವಳಿಯ ಎಚ್ಚರಿಕೆ

ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ; ನಾಡು–ನುಡಿಯ ಹಿರಿಮೆ ನೆನೆದ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 18:50 IST
Last Updated 1 ನವೆಂಬರ್ 2020, 18:50 IST
ಕನ್ನಡ ಗೆಳೆಯರ ಬಳಗದ ವತಿಯಿಂದ ಭಾನುವಾರ ರಾಜ್ಯೋತ್ಸವ ಆಚರಿಸಲಾಯಿತು
ಕನ್ನಡ ಗೆಳೆಯರ ಬಳಗದ ವತಿಯಿಂದ ಭಾನುವಾರ ರಾಜ್ಯೋತ್ಸವ ಆಚರಿಸಲಾಯಿತು   

ಬೆಂಗಳೂರು: ನಗರದಲ್ಲಿ ಭಾನುವಾರ 65ನೇ ಕರ್ನಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಕನ್ನಡಮ್ಮನ ಗೀತೆಗಳು, ನಾಡಿನ ಹಿರಿಮೆ ಸಾರುವ ಹಾಡುಗಳು ಎಲ್ಲೆಡೆ ಕೇಳಿ ಬಂದವು. ಬಸ್‌, ಆಟೊ, ಬೈಕ್‌ಗಳಲ್ಲಿ ಕರ್ನಾಟಕದ ಬಾವುಟ ರಾರಾಜಿಸಿದವು.

ಸಾರ್ವಜನಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಇರದಿದ್ದರೂ, ರಾಜ್ಯೋತ್ಸವ ಆಚರಣೆಯ ಹುಮ್ಮಸ್ಸು ಕುಂದಿರಲಿಲ್ಲ. ಎಲ್ಲೆಡೆ ಕನ್ನಡದ ಬಾವುಟ ಪ್ರತಿನಿಧಿಸುವ ಬಣ್ಣದ ಕಾಗದಗಳನ್ನು ಅಂಟಿಸಿದ್ದರಿಂದ ನಗರ ಪೂರ್ತಿ ಅರಿಷಿಣ–ಕುಂಕುಮ ಲೇಪಿಸಿಕೊಂಡಂತೆ ಕಾಣುತ್ತಿತ್ತು.

ಸರ್ಕಾರಿ ಕಚೇರಿಗಳು, ವಿವಿಧ ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳು ಸರಳವಾಗಿ ರಾಜ್ಯೋತ್ಸವ ಆಚರಿಸಿದವು.

ADVERTISEMENT

ಕರವೇ

ಕರ್ನಾಟಕ ರಕ್ಷಣಾ ವೇದಿಕೆ ಕಚೇರಿ ಮುಂಭಾಗ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ, ‘ಕೇಂದ್ರ ಸರ್ಕಾರವು ದಕ್ಷಿಣ ಭಾರತೀಯರನ್ನು ದೇಶದ ನಾಗರಿಕರೆಂದು ಪರಿಗಣಿಸಿಯೇ ಇಲ್ಲವೆನ್ನುವಂತೆ ವರ್ತಿಸುತ್ತಿದೆ. ದ್ರಾವಿಡ ಚಳವಳಿ ಮತ್ತೆ ನಡೆಸುವ ಅವಶ್ಯಕತೆ ಇದೆ’ ಎಂದರು.

‘ರಾಜ್ಯೋತ್ಸವವನ್ನು ಸಂಘ–ಸಂಸ್ಥೆಗಳು ಸರಳವಾಗಿ ಆಚರಿಸಬೇಕು ಎಂದು ಸರ್ಕಾರ ಹೇಳುತ್ತದೆ. ಆದರೆ ಸರ್ಕಾರ ನಡೆಸುವ‌ ಪಕ್ಷವು, ಉಪಚುನಾವಣೆಗಳಲ್ಲಿ ಹತ್ತಾರು ಸಾವಿರ ಜನರನ್ನು ಸೇರಿಸಿ, ಸಿನಿಮಾ ಕಲಾವಿದರನ್ನು‌ ಕರೆಯಿಸಿ ರ‍್ಯಾಲಿಗಳನ್ನು ನಡೆಸುತ್ತದೆ. ನೀವು ಹೇಳುವ ನಿಯಮಗಳು ನಿಮಗೆ ಅನ್ವಯಿಸುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಕನ್ನಡ ಗೆಳೆಯರ ಬಳಗ

‘ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ತಾಂತ್ರಿಕ ಕಾರಣ ನೀಡಿ ರದ್ದು ಮಾಡಿದೆ. ಮಹಿಷಿ ವರದಿಯನ್ನು ಕಾನೂನಿನ ರಕ್ಷಣೆಯಿಲ್ಲ ಎಂದು ಹೇಳಿ ನ್ಯಾಯಾಲಯ ವಜಾ ಮಾಡಿದೆ. ಜಾಹೀರಾತುಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂಬ ನಿಯಮವೇ ಇಲ್ಲ. ಎಷ್ಟೋ ವಲಯಗಳಲ್ಲಿ ಕನ್ನಡ ಬಳಕೆಯ ಅಧಿಕೃತ ಮಾರ್ಗಸೂಚಿಯೇ ಇಲ್ಲ’ ಎಂದು ಬಳಗದ ರಾ.ನಂ. ಚಂದ್ರಶೇಖರ ಹೇಳಿದರು.

ರಾಜ್ಯೋತ್ಸವ ಪ್ರಯುಕ್ತ ಕವಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಡಾ. ರುದ್ರೇಶ್‌ ಅದರಂಗಿ, ಕ. ಜಯಚಂದ್ರು, ಬಿ.ವಿ. ರವಿಕುಮಾರ್ ಇತರರು ಹಾಜರಿದ್ದರು.

ಬಿಇಎಲ್‌

ನಗರದ ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಬಿಇಎಲ್‌ ಕಾರ್ಮಿಕ ಹಿತರಕ್ಷಕ ಸಮಿತಿಯಿಂದ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸಲಾಯಿತು. ಕಲಾಕ್ಷೇತ್ರದಲ್ಲಿ ಕುವೆಂಪು ಮೂರ್ತಿಗೆ ಮಾಲಾರ್ಪಣೆ ಮಾಡಿದರು. ನಂತರ ಹಳದಿ ಹಾಗೂ ಕೆಂಪು ಶಾಲು ಧರಿಸಿ, ಕನ್ನಡ ಧ್ವಜ ಹಿಡಿದು ಕಾಲ್ನಡಿಗೆ ಜಾಥಾ ನಡೆಸಲಾಯಿತು.

ಅಧಿಕಾರಿಗಳಾದ ಹೇಮಾರಾವ್, ಎಂ. ಗುರುರಾಜ್ ಇದ್ದರು. ಸಮಿತಿಯ ಅಧ್ಯಕ್ಷ ಬಾಬುಲಾಲ್‌ ಅಧ್ಯಕ್ಷತೆ ವಹಿಸಿದ್ದರು. ಎಲ್.ಕೆ. ಶಿವರಾಜ್, ನವೀನ್ ಕುಮಾರ್,ಪಳಿನಿ, ಸಂಜೀತ್ ಕುಮಾರ್, ಡಿ. ಸಂತೋಷಕುಮಾರ್, ವರದರಾಜು ಇದ್ದರು.

ಕ್ರೈಸ್ತರ ಕನ್ನಡ ಸಂಘದಿಂದ ರಾಜ್ಯೋತ್ಸವ

ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ವತಿಯಿಂದ ರಾಜ್ಯೋತ್ಸವ ಆಚರಿಸಲಾಯಿತು. ನಗರದ ಎಂ.ಜಿ. ರಸ್ತೆಯಲ್ಲಿರುವ ರೆವರೆಂಡ್ ಕಿಟೆಲ್‌ರವರ ಪ್ರತಿಮೆಗೆ ಫಾದರ್ ಸೈಮನ್‌ ಬರ್ತೊಲೋಮಿಯೊ ಅವರು ಮಾಲಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರೊ. ಎ.ವಿ. ನಾವಡ ಅವರು ಕಿಟೆಲ್‌ರ ಸಾಹಿತ್ಯ ಮತ್ತು ಕನ್ನಡ ಶಬ್ದಕೋಶದ ಬಗ್ಗೆ ಮಾತನಾಡಿದರು. ಕ್ರೈಸ್ತ ಇತಿಹಾಸಕಾರ ಮಧುಸೂದನ್ ವಿದೇಶಿ ಕ್ರೈಸ್ತರ ಸಾಹಿತ್ಯ ಕೊಡುಗೆ ಬಗ್ಗೆ ಉಪನ್ಯಾಸ ನೀಡಿದರು. ಕಾಂಗ್ರೆಸ್ ನಾಯಕ ಅಮರ್‌ನಾಥ್ ಹಾಗೂ ಕೊರೊನಾ ಸೇನಾನಿಗಳಾದ ಕ್ರಿಸ್ತೋಫರ್ ರಾಜನ್ ಸಗಾಯರಾಜ್ , ಕ್ರಿಸ್ಟಿ ಮತ್ತಿತರರನ್ನು ಗೌರವಿಸಲಾಯಿತು. ನಗರದ ಹಲವು ಚರ್ಚ್‌ಗಳಲ್ಲಿಯೂ ಧ್ವಜಾರೋಹಣ ಮಾಡಿ ಸಿಹಿ ಹಂಚಲಾಯಿತು.

ಬಿಜೆಪಿ:ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ಸಂಸದರ ಶಾಲೆ ಅಭಿಯಾನದೊಂದಿಗೆ ರಾಜ್ಯೋತ್ಸವ ಆಚರಣೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು. ‘ಕನ್ನಡ ಉಳಿಯಬೇಕೆಂದರೆ ಸರ್ಕಾರಿ ಶಾಲೆ ಉಳಿಯಬೇಕು. ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ತೇಜಸ್ವಿ ಸೂರ್ಯ ಹೇಳಿದರು.

ಗೋಕಾಕ ಚಳವಳಿ ಉದ್ಯಾನದಲ್ಲಿ ಉಚಿತ ವೈ–ಫೈ

ರಾಜ್ಯೋತ್ಸವದ ಅಂಗವಾಗಿ ಮಲ್ಲೇಶ್ವರದ ಗೋಕಾಕ ಚಳವಳಿ ಉದ್ಯಾನದಲ್ಲಿ ಉಚಿತ ವೈ–ಫೈ ಸೌಲಭ್ಯಕ್ಕೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಭಾನುವಾರ ಚಾಲನೆ ನೀಡಿದರು. ಆಕ್ಟ್‌ ಫೈಬರ್‌ ನೆಟ್‌ವತಿಯಿಂದ ಈ ಸೌಲಭ್ಯವನ್ನು ಒದಗಿಸಲಾಗಿದೆ.

‘ಆಕ್ಟ್‌ ಫೈಬರ್‌ನೆಟ್‌ನ ಈ ಉಪಕ್ರಮ ಸ್ವಾಗತಾರ್ಹ. ಮತ್ತಷ್ಟು ಖಾಸಗಿ ಕಂಪನಿಗಳು ಮುಂದೆ ಬಂದು ಈ ಉದ್ಯಾನವನ್ನು ನಿರ್ವಹಿಸಬೇಕು’ ಎಂದು ಡಿಸಿಎಂ ಹೇಳಿದರು.

100 ಎಂಬಿಪಿಎಸ್‌ ವೇಗದಲ್ಲಿ ಅಂತರ್ಜಾಲ ಸೌಲಭ್ಯ ದೊರೆಯಲಿದೆ. ಉದ್ಯಾನಕ್ಕೆ ಬರುವವರು ತಮ್ಮ ಹೆಸರು ನೋಂದಾಯಿಸಿಕೊಂಡು ವೈಫೈಗೆ ಲಾಗಿನ್‌ ಆಗಬಹುದು. 45 ನಿಮಿಷ ಈ ಸೇವೆಯನ್ನು ಬಳಸಿಕೊಳ್ಳಬಹುದು.

ಉದ್ಯಾನದ ನಿರ್ವಹಣೆಯನ್ನು ಬಿಬಿಎಂಪಿಯಿಂದ ಆಕ್ಟ್‌ ಫೈಬರ್‌ನೆಟ್‌ ಸಂಸ್ಥೆಗೆ ವಹಿಸಲಾಗಿದೆ. ಸಂಸ್ಥೆಯ ಉಪಾಧ್ಯಕ್ಷ ಸುನೀಲ್‌ ಯಜಮಾನ ಹಾಗೂ ಇತರರು ಉಪಸ್ಥಿತರಿದ್ದರು.

‘ಕೂ ಆ್ಯಪ್‌ ಕಾರ್ಯ ಶ್ಲಾಘನಾರ್ಹ’

‘ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆ ಸ್ಥಾನವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕೂ ಆ್ಯಪ್‌ ಪ್ರಯತ್ನ ಶ್ಲಾಘನೀಯವಾಗಿದ್ದು, ಇಂಥ ಪ್ರಯತ್ನ ಹೆಚ್ಚಾಗಲಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕೂ ಆ್ಯಪ್, ವರ್ಚುವಲ್‌ ಮೂಲಕ ಆಯೋಜಿಸಿದ್ದ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಟ್ವಿಟರ್ ಮಾದರಿಯಲ್ಲಿ ಕೂ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಕನ್ನಡದಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ಕನ್ನಡದವರೇ ಆದ ಅಪ್ರಮೇಯ ಅವರ ಪ್ರಯತ್ನ ಸ್ವಾಗತಾರ್ಹ’ ಎಂದರು.

ಕೂ ಆ್ಯಪ್‌ನ ಸಿಇಒ ಅಪ್ರಮೇಯ, ಹಾಸ್ಯನಟ ಪ್ರಾಣೇಶ್, ನಟಿ ನೀತು ಶೆಟ್ಟಿ, ನಟ ನವೀನ್‌ ಕೃಷ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.