ADVERTISEMENT

ಕನ್ನಡಮ್ಮನ ಹಬ್ಬಕ್ಕೆ ಹಲವು ಬಣ್ಣ

ನಗರದ ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 19:40 IST
Last Updated 1 ನವೆಂಬರ್ 2024, 19:40 IST
ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಮೈದಾನಕ್ಕೆ ರಂಗು ತುಂಬಿದ ಸಾಂಸ್ಕೃತಿಕ ಕಾರ್ಯಕ್ರಮ   –ಪ್ರಜಾವಾಣಿ ಚಿತ್ರ
ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಮೈದಾನಕ್ಕೆ ರಂಗು ತುಂಬಿದ ಸಾಂಸ್ಕೃತಿಕ ಕಾರ್ಯಕ್ರಮ   –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಗಸದಲ್ಲಿ ಕೆಂ‍ಪು–ಹಳದಿ ತೋರಣಗಳ ಓಕುಳಿ, ನೆಲದಲ್ಲಿ ಅದೇ ಬಣ್ಣತೊಟ್ಟ ಮಕ್ಕಳ ಚಿಲಿಪಿಲಿ. ನಾಡದೇವಿ ಭುವನೇಶ್ವರಿಯ ವೇಷ ತೊಟ್ಟ ಪುಟ್ಟಿಗೆ, ನಾಡಧ್ವಜ ಹೊದ್ದ ಚಿಣ್ಣರ ನಮನ. 

ನಾಡಪ್ರೇಮವನ್ನು ಉದ್ದೀಪಿಸುವ, ನವಿರೇಳಿಸುವ ಇಂಥದ್ದೊಂದು ಕ್ಷಣಗಳಿಗೆ ಸಾಕ್ಷಿಯಾಗಿದ್ದು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ.

ನಗರದ ವಿವಿಧ ಭಾಗಗಳ ಶಾಲೆಗಳಿಂದ ಬಂದಿದ್ದ ಮಕ್ಕಳು ಬಣ್ಣ–ಬಣ್ಣದ ಉಡುಗೆ ತೊಟ್ಟು, ಹಾಡಿ–ಕುಣಿದು ಕನ್ನಡಮ್ಮನಿಗೆ ಗೌರವ ಸಲ್ಲಿಸಿದರು. ರಾಜ್ಯಕ್ಕೆ 69 ವರ್ಷಗಳಾದ, ಕರ್ನಾಟಕ ಎಂದು ಹೆಸರಾಗಿ 51 ವರ್ಷಗಳಾದ ಆಚರಣೆಯಲ್ಲಿ ಕುಣಿದು ಸಂಭ್ರಮಿಸಿದರು. 

ADVERTISEMENT

ಇನ್ನೊಂದೆಡೆ ಮತ್ತಷ್ಟು ವಿದ್ಯಾರ್ಥಿಗಳು ಸಮವಸ್ತ್ರ ತೊಟ್ಟು ಶಿಸ್ತಿನ ಸಿಪಾಯಿಗಳಂತೆ ಪಥಸಂಚಲನ ನಡೆಸಿ ವೇದಿಕೆ ಮೇಲಿದ್ದ ಅತಿಥಿಗಳನ್ನು ಗೌರವಿಸಿದರು. ಆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತ್ರಿವರ್ಣ ಧ್ವಜವನ್ನು ಹಾರಿಸಿದರು. ರಾಷ್ಟ್ರಗೀತೆ ಅದಕ್ಕೆ ಜೊತೆಯಾಯಿತು. ಅದರ ಬೆನ್ನಲ್ಲೇ ನಾಡಧ್ವಜಾರೋಹಣ, ಮಕ್ಕಳಿಂದ ನಾಡಗೀತೆ.

ಕನ್ನಡನಾಡಿನ ಪ್ರಾದೇಶಿಕ ವೈವಿಧ್ಯವನ್ನು ತೆರೆದಿಟ್ಟ ಜನಪದ ಕುಣಿತಗಳು, ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಮಕ್ಕಳು ಪ್ರಚುರಪಡಿಸಿದರು. ಅವುಗಳನ್ನು ಸವಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಕ್ಕಳೇ, ನಿಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ. ಕನ್ನಡ ಬಾರದವರಿಗೆ ಕಲಿಸುತ್ತೇವೆ ಎಂದು ಶಪಥ ಮಾಡಿ’ ಎಂದರು.

‘ನಮ್ಮ ನಾಡು–ನುಡಿಯನ್ನು ಬಲಿಕೊಟ್ಟು ಉದಾರಿಗಳಾಗಬಾರದು. ಭಾಷಾ ವ್ಯಾಮೋಹ ಅತಿಯಾಗಬಾರದು, ಆದರೆ ಅಭಿಮಾನವನ್ನು ಬಿಟ್ಟುಕೊಡಬಾರದು. ಅಭಿಮಾನ ಇಲ್ಲದೇ ಹೋದರೆ ಭಾಷೆ ಹೇಗೆ ಬೆಳೆಯುತ್ತದೆ? ಭಾಷೆ ಬೆಳೆಯಬೇಕೆಂದರೆ ನಾವು ಮೊದಲು ಕನ್ನಡಿಗರಾಗಬೇಕು. ಬೇರೆ ಭಾಷೆಯನ್ನೂ ಕಲಿತು ಭಾಷಾ ಸಂಪತ್ತು ಬೆಳೆಸಿಕೊಳ್ಳಬೇಕು, ಕನ್ನಡವನ್ನು ಮರೆಯಬಾರದು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ನೆರವಿಗಾಗಿ ರೂಪಿಸಿದ ‘ಕನ್ನಡ ದೀವಿಗೆ’ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕನ್ನಡ ಕವಿ–ದಾರ್ಶನಿಕರ ಮಾತುಗಳನ್ನು ಹೇಳಿ ಮಕ್ಕಳನ್ನು ಹುರಿದುಂಬಿಸಿದರು. 

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಚಿಕ್ಕಿ–ಬಾಳೆಹಣ್ಣು ಹಾಗೂ ಮಾಲ್ಟ್‌ ಒದಗಿಸುತ್ತಿರುವ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು. ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಕನ್ನಡಮ್ಮ ಭುವನೇಶ್ವರಿಗೆ ನೃತ್ಯಗೌರವ ಸಲ್ಲಿಸಿದ ವಿದ್ಯಾರ್ಥಿನಿಯರು   –ಪ್ರಜಾವಾಣಿ ಚಿತ್ರ
ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಶಾಲಾ ಮಕ್ಕಳ ಪಥಸಂಚಲನ  –ಪ್ರಜಾವಾಣಿ ಚಿತ್ರ
ರಾಜ್ಯವು ಸರ್ವಜನಾಂಗದ ಶಾಂತಿಯ ತೋಟ. ಹೀಗಾಗಿಯೇ ಎಲ್ಲ ಕಡೆಯ ಜನ ಇಲ್ಲಿ ಬದುಕು ಕಟ್ಟಿಕೊಟ್ಟಿದ್ದಾರೆ. ಕನ್ನಡವನ್ನು ಬದುಕಿನ ಭಾಷೆಯಾಗಿಸುವುದೇ ನಮ್ಮ ಗುರಿ
ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಶಾಲಾ ಮಕ್ಕಳಲ್ಲಿ ಜಾತ್ಯತೀತ ಸಮಾನ ಸಹಬಾಳ್ವೆ ಮತ್ತು ಸಹಕಾರದ ಮನೋಭಾವಗಳನ್ನು ಮೂಡಿಸಲು ಸಂವಿಧಾನದ ಪ್ರಸ್ತಾವನೆ ಓದಿಸುವ ಪದ್ಧತಿ ಜಾರಿಗೆ ತರಲಾಗಿದೆ
ಮಧು ಬಂಗಾರಪ್ಪ ಶಾಲಾ ಶಿಕ್ಷಣ ಸಚಿವ

ಕನ್ನಡಿಗರ ಹೀಯಾಳಿಸಿದರೆ ಕಠಿಣ ಕ್ರಮ: ಸಿ.ಎಂ

‘ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವಂತಹ ಪ್ರವೃತ್ತಿ ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದು ನಾಡದ್ರೋಹ. ಇಂತಹದ್ಧರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ‘ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಭಾಷೆಯನ್ನಾಡುವ ಜನರಿದ್ದಾರೆ. ಅವರು ಯಾವುದೇ ಜಾತಿ–ಧರ್ಮದವರಾಗಿದ್ದರೂ ಎಲ್ಲಿಯವರೇ ಆಗಿದ್ದರೂ ಇಲ್ಲಿನ ನೆಲ–ಗಾಳಿ–ನೀರನ್ನು ಬಳಸಿದ ಮೇಲೆ ಕನ್ನಡಿಗರೇ ಹೌದು. ಅವರೆಲ್ಲರೂ ಕನ್ನಡ ಕಲಿಯಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.