ಬೆಂಗಳೂರು: ಭಾಷೆಗೆ ಯಾವುದೇ ಗಡಿ ಇಲ್ಲ. ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯುತ್ತದೆ ಎಂದು ಸಾಹಿತಿ ಸುಧಾಮೂರ್ತಿ ತಿಳಿಸಿದರು.
ರಾಜ್ಯೋತ್ಸವ ಪ್ರಯುಕ್ತ ಸಪ್ನ ಬುಕ್‌ಹೌಸ್ ಶುಕ್ರವಾರ ಹಮ್ಮಿಕೊಂಡಿದ್ದ ‘ಪುಸ್ತಕ ಜಾತ್ರೆ’ಯಲ್ಲಿ ರಿಯಾಯಿತಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ಕನ್ನಡವೂ ಭಿನ್ನವಾಗಿದೆ ಎಂದು ಹೇಳಿದರು.
ಉಚಿತ ಕನ್ನಡ ಪುಸ್ತಕಗಳ ವಿತರಣೆ ಉದ್ಘಾಟಿಸಿದ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ಪುಸ್ತಕ ಜಾತ್ರೆ, ಪುಸ್ತಕ ಸಂಸ್ಕೃತಿ ಮೂಲಕ ಕನ್ನಡ ಪ್ರಜ್ಞೆಯನ್ನು ಬೆಳೆಸಲಾಗುತ್ತಿದೆ’ ಎಂದು ಶ್ಲಾಘಿಸಿದರು.
ನಟಿ ಅಂಕಿತಾ ಅಮರ್ ಮಾತನಾಡಿ, ‘ನಾಟಕ, ಸಿನಿಮಾ, ನೃತ್ಯ ಏನೇ ಇರಲಿ. ಅದಕ್ಕೆ ಸಾಹಿತಿಗಳ ಬರವಣಿಗೆಯೇ ಮೂಲ. ಹಾಗಾಗಿ ಸಾಹಿತಿಗಳೇ ಮೇರು ನಟರು. ಎಲ್ಲ ಕ್ಷೇತ್ರಗಳಲ್ಲಿ ವಯಸ್ಸಾಗುತ್ತಿದ್ದಂತೆ ಕಸುವು ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಸಾಹಿತಿಗಳು ಮಾಗುತ್ತಾ ಹೋಗುತ್ತಾರೆ. ಬರವಣಿಗೆ ಇನ್ನಷ್ಟು ಪಕ್ವವಾಗುತ್ತದೆ. ಚಿಂತನೆಗೆ ಹಚ್ಚುವ ಶಕ್ತಿ ಬರವಣಿಗೆಗ ಮಾತ್ರ ಇದೆ’ ಎಂದರು.
ಸಪ್ನ ಬುಕ್‌ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಸಾಹಿತಿಗಳಾದ ಹಂ.ಪ.ನಾಗರಾಜಯ್ಯ, ದೊಡ್ಡರಂಗೇಗೌಡ, ಮಲ್ಲೇಪುರಂ ಜಿ. ವೆಂಕಟೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.