ಬೆಂಗಳೂರು: ಕನ್ನಡ ನಾಮಫಲಕ ಜಾಗೃತಿ ಜಾಥಾ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಜಾಥಾ ತಲುಪುತ್ತಿದ್ದಂತೆ ಸುತ್ತುವರಿದ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿದರು.
ಇದೇ ರೀತಿ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆಯಿತು.
'ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ನೆಲದ ಭಾಷೆ. ಕರ್ನಾಟಕದ ಎಲ್ಲ ವ್ಯಾಪಾರ, ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂಬ ಸರ್ಕಾರದ ನಿಯಮಾವಳಿಗಳು ಇದ್ದರೂ ಸಹ ಕೆಲವು ಉದ್ಯಮಿಗಳು, ವ್ಯಾಪಾರಸ್ಥರು ಕನ್ನಡದ ಅಸ್ಮಿತೆಯನ್ನು ಅಗೌರವದಿಂದ ಕಾಣುತ್ತ, ಕನ್ನಡದಲ್ಲಿ ನಾಮಫಲಕಗಳನ್ನು ಹಾಕದೇ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ನವೆಂಬರ್ 1ರಿಂದ ಸತತವಾಗಿ ರಾಜ್ಯಾದ್ಯಂತ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸುತ್ತ ಬಂದಿದೆ. ಆದರೂ ಕೆಲವು ವಲಸಿಗ ದುರಹಂಕಾರಿ ವ್ಯಾಪಾರಸ್ಥರು ನಾಮಫಲಕ ಬದಲಿಸದ ಹಿನ್ನೆಲೆಯಲ್ಲಿ ಡಿಸೆಂಬರ್ 27ರೊಳಗೆ ನಾಮಫಲಕ ಕನ್ನಡೀಕರಿಸಲು ಕರ್ನಾಟಕ ರಕ್ಷಣಾ ವೇದಿಕೆ ಗಡುವು ನೀಡಿತ್ತು. ನಾಮಫಲಕ ಬದಲಾಯಿಸದೆ ಉಡಾಫೆ ತೋರಿಸಿದ್ದಾರೆ. ಇದನ್ನು ಖಂಡಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ನಾಡಪ್ರಭು ಕೆಂಪೇಗೌಡರ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್ ಬಳಿ ಸಮಾವೇಶಗೊಂಡು, ಅಲ್ಲಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಾಗಿದೆ' ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.