ADVERTISEMENT

ಇಂಗ್ಲಿಷ್ ನಾಮಫಲಕಗಳಿಗೆ ಮಸಿ, ಫಲಕ ಧ್ವಂಸ: ಕರವೇ ಕೆಂಡ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 16:11 IST
Last Updated 27 ಡಿಸೆಂಬರ್ 2023, 16:11 IST
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ನೇತೃತ್ವದಲ್ಲಿ ಬುಧವಾರ ನಗರದ ಏರ್‌ಪೋರ್ಟ್ ರಸ್ತೆಯ ಸಾದಹಳ್ಳಿ ಗೇಟ್‌ನಿಂದ ಕನ್ನಡ ಜಾಗೃತಿ ಮೆರವಣಿಗೆ ನಡೆಯಿತು
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ನೇತೃತ್ವದಲ್ಲಿ ಬುಧವಾರ ನಗರದ ಏರ್‌ಪೋರ್ಟ್ ರಸ್ತೆಯ ಸಾದಹಳ್ಳಿ ಗೇಟ್‌ನಿಂದ ಕನ್ನಡ ಜಾಗೃತಿ ಮೆರವಣಿಗೆ ನಡೆಯಿತು   

ಬೆಂಗಳೂರು: ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ನಡೆಸಿದ ಜಾಗೃತಿ ಮೆರವಣಿಗೆ ಕೆಲವು ಕಡೆಗಳಲ್ಲಿ ಅಹಿತಕರ ಘಟನೆಗೆ ಕಾರಣವಾಯಿತು. ಏರ್‌ಪೋರ್ಟ್‌ ರಸ್ತೆಯಲ್ಲಿ ಇಂಗ್ಲಿಷ್‌ ಫಲಗಳನ್ನು ಕಿತ್ತು ಹಾಕಿದರೆ, ಎಂ.ಜಿ. ರಸ್ತೆ ಸುತ್ತಮುತ್ತ ಕನ್ನಡೇತರ ನಾಮಫಲಕಗಳಿಗೆ ಮಸಿ ಬಳಿಯಲಾಯಿತು.

ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಸಾದಹಳ್ಳಿ ಗೇಟ್ ಬಳಿಯಿಂದ ಜಾಗೃತಿ ಮೆರವಣಿಗೆ‌ ಆರಂಭಗೊಂಡಿತು. ಪೊಲೀಸರು ಬ್ಯಾರಿಕೇಡ್‌ ಹಾಕಿ ತಡೆಯಲು ಪ್ರಯತ್ನಿಸಿದರು. ಆಗ ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತಿಕ್ಕಾಟ ನಡೆಯಿತು. ಬ್ರಿಗೇಡ್ ರಸ್ತೆಯಲ್ಲಿ ಲಾಠಿ ಬೀಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು.

ಸಾದಹಳ್ಳಿಯ ಬ್ಲೂಮ್ ಹೋಟೆಲ್‌ ಸೇರಿದಂತೆ ಹಲವು ಹೋಟೆಲ್‌, ಅಂಗಡಿಗಳ ಲೈಟಿಂಗ್ ಬೋರ್ಡ್ ಒಡೆದು ಹಾಕಿದರು. ಕನ್ನಡ ಇಲ್ಲದ ಹೋರ್ಡಿಂಗ್‌ಗಳನ್ನು ಹರಿದು ಹಾನಿ ಮಾಡಿದರು. ಚಿಕ್ಕಜಾಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಫಲಕಗಳನ್ನು ಕಿತ್ತು ಹಾಕಲಾಯಿತು. 

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಘಟಕದ ನೇತೃತ್ವದಲ್ಲಿ ನಗರದ ಒಳಗೆ ಮೆರವಣಿಗೆಗಳಾದವು. ರಾಜಾಜಿನಗರ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಅತ್ತಿಗುಪ್ಪೆ, ಕೆ.ಆರ್.ಪುರ, ವಿಜಯನಗರ, ಮೈಸೂರು ರಸ್ತೆ, ಚಿಕ್ಕಪೇಟೆ, ಗಾಂಧಿನಗರ, ಕಬ್ಬನ್‌ಪಾರ್ಕ್‌ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾರ್ಯಕರ್ತರು ಆಂದೋಲನ ನಡೆಸಿದರು. ಹಲವು ನಾಮಫಲಗಳನ್ನು ಕಿತ್ತು ಹಾಕಿದರು. ಕೀಳಲು ಸಾಧ್ಯವಾಗದ ಫಲಕಗಳಿಗೆ ಮಸಿ ಬಳಿದರು.

ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಹಲವು ಕಡೆ ಮಾತಿನ ಚಕಮಕಿಗಳು ನಡೆದವು. ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು‌. ಹಲವು ಕಡೆಗಳಲ್ಲಿ ಏಕಕಾಲಕ್ಕೆ ಆಂದೋಲನ ಆರಂಭವಾಗಿದ್ದರಿಂದ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಯಿತು. 

ಸ್ಪಷ್ಟ ಸಂದೇಶ

‘ಕನ್ನಡ ನಾಮಫಲಕ ಜಾಗೃತಿ ಆಂದೋಲನ ಅಭೂತಪೂರ್ವ ಯಶಸ್ಸು ಕಂಡಿದೆ. ರಾಜ್ಯದ ಮೂಲೆ ಮೂಲೆಯಿಂದ ಬಂದ ಕಾರ್ಯಕರ್ತರು ಕನ್ನಡೇತರ ಸಾವಿರಾರು ನಾಮಫಲಕಗಳನ್ನು ಕಿತ್ತು ಹಾಕಿದ್ದಾರೆ. ಕನ್ನಡವನ್ನು, ಕನ್ನಡಿಗರನ್ನು ತಿರಸ್ಕಾರದಿಂದ ನೋಡುತ್ತಿದ್ದವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ಪಷ್ಟ ಸಂದೇಶ ನೀಡಿದೆ. ಕನ್ನಡಿಗರ ತಾಳ್ಮೆಯನ್ನು ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ ಇವತ್ತಿನ ಪ್ರತಿಭಟನೆ ಉದಾಹರಣೆ’ ಎಂದು ವೇದಿಕೆಯ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.

ಫಲಕ ಬದಲಾವಣೆಗೆ ಸಮಯ ಕೊಡಿ: ಎಫ್‌ಕೆಸಿಸಿಐ

ವಾಣಿಜ್ಯ ಸಂಸ್ಥೆಗಳಿಗೆ ಶೇ 60ರಷ್ಟು ಕನ್ನಡ ನಾಮಫಲಕ ಅಳವಡಿಸುವ ಬಿಬಿಎಂಪಿ ನಿರ್ದೇಶನದ ಪಾಲನೆಗೆ ಸಮಯ ನೀಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಕೋರಿದೆ. ಕಡ್ಡಾಯ ಕನ್ನಡ ನಾಮಫಲಕಗಳನ್ನು ಅಳವಡಿಸುವುದಕ್ಕೆ ಫೆ.28ರವರೆಗೆ ಗಡುವು ಇದೆ. ಹಾಗಾಗಿ ಯಾವುದೇ ಕ್ರಮ  ತೆಗೆದುಕೊಳ್ಳಬಾರದು. ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಕಿರುಕುಳ ನೀಡಲು ಕಾನೂನು ಬಳಕೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಎಫ್‍ಕೆಸಿಸಿಐ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಎಫ್‍ಕೆಸಿಸಿಐ ಹಾಗೂ ಸದಸ್ಯ ಸಂಸ್ಥೆಗಳು ಯಾವಾಗಲೂ ಸರ್ಕಾರದ ನಿಯಮಗಳನ್ನು ಅನುಸರಿಸುತ್ತಾ ಬಂದಿದೆ. ಆದೇಶ ಸೂಚನೆಗಳನ್ನು ಪಾಲಿಸುವಂತೆ ಸದಸ್ಯರಿಗೆ ಸೂಚನೆ ನೀಡುತ್ತದೆ ಎಂದು ಹೇಳಿದ್ದಾರೆ.

ನಾಲ್ಕು ಎಫ್ಐಆರ್‌ 500ಕ್ಕೂ ಹೆಚ್ಚು ಕಾರ್ಯಕರ್ತರ ವಶ

ಕರ್ನಾಟಕ ರಕ್ಷಣಾ ವೇದಿಕೆಯ ಜಾಗೃತಿ ಮೆರವಣಿಗೆ ವೇಳೆ ಕೆಲವು ಪ್ರದೇಶದಲ್ಲಿ ಅಹಿತಕರ ಘಟನೆಗಳು ನಡೆದಿದ್ದು ಈ ಸಂಬಂಧ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಆಗ್ನೇಯ ವಿಭಾಗದಲ್ಲಿ 1 ಪಶ್ಚಿಮದಲ್ಲಿ 1 ಈಶಾನ್ಯ ವಿಭಾಗದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಅಹಿತಕರ ಘಟನೆಯಲ್ಲಿ ಭಾಗಿಯಾದ 500ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಶಾಂತಿ ಭಂಗ ಹಾಗೂ ಪ್ರಚೋದನೆ ನೀಡಿದ ಆರೋಪದ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು: ತಂಗಡಗಿ

‘ಅಂಗಡಿ ಮಳಿಗೆ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಸಬೇಕೆಂಬ ಮಾರ್ಗಸೂಚಿ ಉಲ್ಲಂಘಿಸುವವರ ಉದ್ದಿಮೆ ಪರವಾನಗಿ ರದ್ದುಗೊಳಿಸಲು ಕಠಿಣ ನಿಯಮಗಳನ್ನು ರೂಪಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಕನ್ನಡ ನಾಮಫಲಕ ಜಾಗೃತಿ ಹೋರಾಟ ಕುರಿತು ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು ‘ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಪದಗಳೇ ಇರಬೇಕು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯಡಿ ಕಠಿಣ ನಿಯಮಗಳನ್ನು ರೂಪಿಸಲಾಗುವುದು’ ಎಂದರು. ಕನ್ನಡದಲ್ಲಿ ನಾಮಫಲಕ ಅಳವಡಿಕೆ ಮೇಲೆ ನಿಗಾ ಇರಿಸಲು ಕಾರ್ಯಪಡೆ ರಚಿಸುವ ಚಿಂತನೆ ನಡೆದಿದೆ. ಸರ್ಕಾರದ ಎಲ್ಲ ಇಲಾಖೆಗಳ ಕಡತಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ‘ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆ ಮಾಡಬೇಕೆಂಬ ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹಕ್ಕೆ ನಮ್ಮ ಬೆಂಬಲವಿದೆ. ಆದರೆ ಪ್ರತಿಭಟನೆ ಹೆಸರಿನಲ್ಲಿ ಅಂಗಡಿಗಳ ಮೇಲೆ ಕಲ್ಲೆಸೆಯಬಾರದು. ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು’ ಎಂದರು.

ಇಂಗ್ಲಿಷ್‌ ನಾಮಫಲಕದ ಬೋರ್ಡ್‌ ಕೀಳುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.