ಬೆಂಗಳೂರು: ‘ಮಾನಸಿಕವಾಗಿಯೂ ಭ್ರಷ್ಟರಾಗಿರುವ ಮೂರ್ಖ ರಾಜಕಾರಣಿಗಳು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುತ್ತಿದ್ದಾರೆ’ ಎಂದು ಲೇಖಕ ಹಿ.ಚಿ.ಬೋರಲಿಂಗಯ್ಯ ಕಿಡಿಕಾರಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಶುಕ್ರವಾರ ಆಯೋಜಿಸಿದ್ದ ‘ಸಂಸ್ಥಾಪನಾ ದಿನಾಚರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ನಿವೃತ್ತ ಅಧ್ಯಾಪಕರಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ಪರಿಸ್ಥಿತಿಯಲ್ಲಿ ನಾವು ನಮ್ಮ ಭಾಷೆಗಳನ್ನು ಉಳಿಸಿಕೊಳ್ಳಬೇಕಿದೆ. ಆದರೆ, ಆಡಳಿತಗಾರರ ತೀರ್ಮಾನಗಳಿಂದ ಅವುಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದೇವೆ’ ಎಂದು ಅವರು ತಿಳಿಸಿದರು.
‘ತುಂಬಾ ಹಿಂದಿನ ಕಾಲದಲ್ಲಿ ಸಂಸ್ಕೃತವನ್ನು ಎಲ್ಲರೂ ಕಲಿಯುವ ಅವಕಾಶ ಇರಲಿಲ್ಲ. ಹಾಗಾಗಿ ಅದು ಎಲ್ಲೆಡೆ ಹರಡಲಿಲ್ಲ. ಆದರೆ, ಇತ್ತೀಚಿನ ವರ್ಷಗಳಿಂದ ಈ ಭಾಷೆ ಕಲಿಯುವ ಅವಕಾಶ ಎಲ್ಲರಿಗೂ ಸಿಗುತ್ತಿದೆ. ಇದನ್ನು ಆಸಕ್ತರು ಬಳಸಿಕೊಳ್ಳಬೇಕು’ ಎಂದರು.
ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿ ವಿ.ಮುರಳೀಧರ ಶರ್ಮಾ, ‘ಗುರುಕುಲ ಪದ್ಧತಿಯ ಅಧ್ಯಯನವನ್ನು ಪುನರುಜ್ಜೀವನಗೊಳಿಸಬೇಕು. ಅದಕ್ಕೆ ತಂತ್ರಜ್ಞಾನದ ಸಹಾಯ ಪಡೆಯಬೇಕು. ಸಂಸ್ಕೃತ ಅಧ್ಯಯನ ವಿಸ್ತರಿಸಿದರೆ ಭಾಷೆಯ ಸ್ವರೂಪ ಉಳಿಯುತ್ತದೆ. ಇಲ್ಲದಿದ್ದರೆ ಗ್ರೀಕ್, ಲ್ಯಾಟಿನ್‌ನಂತೆ ಸಂಸ್ಕೃತವೂ ಪುಸ್ತಕದಲ್ಲಿಯೇ ಉಳಿಯುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್, ‘ಇಂದು ರಾಜಕಾರಣ, ಧಾರ್ಮಿಕತೆ ಹಾಗೂ ಮಾಧ್ಯಮಗಳಲ್ಲಿ ಅತಿರೇಕಗಳು ಹೆಚ್ಚುತ್ತಿವೆ. ಅದರಲ್ಲಿಯೇ ಜನರು ಕಳೆದುಹೋಗುತ್ತಿದ್ದಾರೆ. ಆ ಅತಿರೇಕಗಳನ್ನು ತೊಡೆದುಹಾಕುವ ಕೆಲಸವನ್ನೂ ವಿಶ್ವವಿದ್ಯಾಲಯ ಮಾಡಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.