ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಶಿಷ್ಯ ವೇತನಕ್ಕೆ ಸಂಬಂಧಿಸಿದಂತೆ ಈ ಸಾಲಿನಿಂದ ಸಂದರ್ಶನವನ್ನು ಕೈಬಿಟ್ಟಿದ್ದು, ಅರ್ಜಿಯ ಜತೆಗೆ ಮೊಬೈಲ್‌ಗಳ ಮೂಲಕ ಚಿತ್ರೀಕರಿಸಿದ ವಿಡಿಯೊಗಳನ್ನು ಆಹ್ವಾನಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್, ‘ಅರ್ಹ ಅಭ್ಯರ್ಥಿಗಳು ಸಂಗೀತ–ನೃತ್ಯದ ವಿವಿಧ ಪ್ರಕಾರಗಳಿಗೆ ಅನುಗುಣವಾಗಿ ವಿಡಿಯೊ ಚಿತ್ರೀಕರಿಸಿ, ಪೆನ್‌ಡ್ರೈವ್‌ನಲ್ಲಿ ಹಾಕಿ ಕಳುಹಿಸಿಕೊಡಬೇಕು. ವಿಡಿಯೊಗಳನ್ನು ತೀರ್ಪುಗಾರರು ಪರಿಶೀಲಿಸಿ, ಆಯ್ಕೆ ಮಾಡುತ್ತಾರೆ’ ಎಂದು ತಿಳಿಸಿದರು.
‘2023–24 ಮತ್ತು 2024–25ನೇ ಸಾಲಿನ ಶಿಷ್ಯ ವೇತನಕ್ಕೆ 200 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ತಲಾ ₹ 10 ಸಾವಿರ ನಗದು ನೀಡಲಾಗುತ್ತದೆ. ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ, ಗಮಕ ವಿಭಾಗಗಳಲ್ಲಿ ಶಿಷ್ಯ ವೇತನಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಗೀತಕ್ಕೆ ಸಂಬಂಧಿಸಿದ ವಿಡಿಯೊಗಳನ್ನು 20 ನಿಮಿಷ ಹಾಗೂ ನೃತ್ಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು 30 ನಿಮಿಷಕ್ಕೆ ಮೀರದಂತೆ ಚಿತ್ರೀಕರಿಸಿ, ಆಗಸ್ಟ್ 12ರೊಳಗೆ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಒಂದು ಕಲಾ ಪ್ರಕಾರದಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು’ ಎಂದು ಹೇಳಿದರು.
ಅಕಾಡೆಮಿ ರಿಜಿಸ್ಟ್ರಾರ್ ಬಿ.ನೀಲಮ್ಮ, ಸದಸ್ಯರಾದ ದೇವರಾಜು ಡಿ. (ಪದ ದೇವರಾಜ್), ಬಿ.ವಿ.ಗೀತಾ ಡಿ.ಎಸ್. ಹಾಗೂ ಉಷಾ ಬಸಪ್ಪ ಉಪಸ್ಥಿತರಿದ್ದರು.
ವಿವರಕ್ಕೆ: sangeetanrityaacademy.karnataka.gov.in
‘ಸಂಗೀತ–ನೃತ್ಯ ಪ್ರತ್ಯೇಕವಾದರೆ ಆದ್ಯತೆ’ ‘ಸಂಗೀತ ಮತ್ತು ನೃತ್ಯ ಪ್ರಕಾರಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇವು ಪರಸ್ಪರ ಪೂರಕವಾಗಿವೆ. ಈ ಕಲಾ ಪ್ರಕಾರಗಳ ವ್ಯಾಪ್ತಿ ದೊಡ್ಡದಿರುವುದರಿಂದ ಪ್ರತ್ಯೇಕವಾಗಬೇಕೆಂಬ ಕೂಗು ಮೊದಲಿನಿಂದ ಇದೆ. ಇದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಒಂದು ವೇಳೆ ಎರಡೂ ಪ್ರತ್ಯೇಕವಾದರೆ ಉಭಯ ಕಲೆಗೂ ಸೂಕ್ತ ಆದ್ಯತೆ ಸಿಗುತ್ತದೆ. ನನ್ನ ಅವಧಿಯಲ್ಲಿ ಎರಡೂ ಕಲೆಯನ್ನು ಸಮಾನವಾಗಿ ಕಂಡು ಪ್ರೋತ್ಸಾಹ ನೀಡಲಾಗುತ್ತದೆ’ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ತಿಳಿಸಿದರು. ‘ಲಭ್ಯವಿರುವ ಅನುದಾನದಡಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಂಗೀತ ನೃತ್ಯೋತ್ಸವ ದಾಖಲೀಕರಣ ಕಾರ್ಯಾಗಾರ ಸೇರಿ ವಿವಿಧ ಚಟುವಟಿಕೆಗಳನ್ನು ವರ್ಷಪೂರ್ತಿ ಹಮ್ಮಿಕೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.