ಬೆಂಗಳೂರು: ಬಿಟ್‌ಕಾಯಿನ್ ಅಕ್ರಮದ ತನಿಖೆ ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾ ದಳದ (ಎಸ್ಐಟಿ) ಪೊಲೀಸರು, ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮತ್ತೊಬ್ಬ ಇನ್‌ಸ್ಪೆಕ್ಟರ್ ಚಂದ್ರಾಧರ್ ಅವರನ್ನು ಬಂಧಿಸಿದ್ದಾರೆ.
ಚಂದ್ರಾಧರ್ ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಂದ್ರಾಧರ್ ಅವರು ಈ ಹಿಂದೆ ಯಲಹಂಕದ ಪೊಲೀಸ್ ತರಬೇತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಕರಣದಲ್ಲಿ ಇವರ ಪಾತ್ರವೂ ಕಂಡುಬಂದ ಮೇಲೆ ಕರ್ತವ್ಯದಿಂದ ಅಮಾನತು ಮಾಡಲಾಗಿತ್ತು. ಬಂಧನದ ಭೀತಿಯಿಂದ ಅವರು ತಲೆಮರೆಸಿಕೊಂಡಿದ್ದರು. ನಗರದಲ್ಲಿರುವ ಅವರ ನಿವಾಸಕ್ಕೆ ಬುಧವಾರ ಬಂದಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಬಿಟ್‌ಕಾಯಿನ್ ಅಕ್ರಮ ಪ್ರಕರಣದಲ್ಲಿ ಇದುವರೆಗೂ ಎಚ್‌ಎಸ್‌ಆರ್ ಲೇಔಟ್‌ನ ಜಿಸಿಐಡಿ ಟೆಕ್ನಾಲಜೀಸ್ ಸಂಸ್ಥೆಯ ಸಿಇಒ ಸಂತೋಷ್, ಪಶ್ಚಿಮ ಬಂಗಾಳದ ರಾಬಿನ್ ಖಂಡೇನ್‌ವಾಲ್, ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ, ಇನ್‌ಸ್ಪೆಕ್ಟರ್‌ಗಳಾದ ಪ್ರಶಾಂತ್ ಬಾಬು, ಲಕ್ಷ್ಮೀಕಾಂತಯ್ಯ ಅವರನ್ನು ಬಂಧಿಸಲಾಗಿದೆ.
ಅಕ್ರಮಕ್ಕೆ ಸಹಕಾರ: 2020ರಲ್ಲಿ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಸಿಬಿಯ ಅಂದಿನ ತನಿಖಾಧಿಕಾರಿಗಳಾಗಿದ್ದ ಲಕ್ಷ್ಮೀಕಾಂತಯ್ಯ, ಶ್ರೀಧರ್ ಪೂಜಾರ್, ಪ್ರಶಾಂತ್ ಬಾಬು ಹಾಗೂ ಸೈಬರ್ ಕ್ರೈಂ ಠಾಣೆಯ ಇನ್‌ಸ್ಪೆಕ್ಟರ್ ಚಂದ್ರಾಧರ್ ಅವರು ಶ್ರೀಕಿ ಹಾಗೂ ರಾಬಿನ್ ಖಂಡೇನ್‌ವಾಲ್, ಸಂತೋಷ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ಆರೋಪಿಗಳು ಪೊಲೀಸ್ ವಶದಲ್ಲಿರುವಾಗಲೇ ಅಕ್ರಮವಾಗಿ ವಿಚಾರಣೆ ನೆಪದಲ್ಲಿ ಸಂತೋಷ್ ಮಾಲೀಕತ್ವದ ಜಿಸಿಐಡಿ ಟೆಕ್ನಾಲಜೀಸ್‌ಗೆ ಕರೆದೊಯ್ದು ಕ್ರಿಪ್ಟೊ ವ್ಯಾಲೆಟ್‌ಗಳನ್ನು ಅನಧಿಕೃತವಾಗಿ ಬಳಸಿಕೊಂಡು ಲಕ್ಷಾಂತರ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದರು. ಈ ಕೃತ್ಯಕ್ಕೆ ಚಂದ್ರಾಧರ್ ಹಾಗೂ ಈ ಹಿಂದೆ ಬಂಧನಕ್ಕೆ ಒಳಗಾಗಿದ್ದ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ ಅವರು ಸಹಕರಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿತ್ತು.
ಪ್ರಮುಖ ಆರೋಪಿ ಶ್ರೀಕಿಗೆ ಲ್ಯಾಪ್‌ಟಾಪ್ ಕೊಡಿಸಿ ಆತನಿಂದ ವಿವಿಧ ಕಂಪನಿಗಳ ವೆಬ್‌ಸೈಟ್ ಹ್ಯಾಕ್ ಮಾಡಿಸಿ ಬಿಟ್ ಕಾಯಿನ್‌ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು ಎಂಬ ಆರೋಪವಿದೆ. ಇದೇ ಪ್ರಕರಣದಲ್ಲಿ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ. ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.