ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ನಾಲ್ಕು ವರ್ಷಗಳ ಅವಧಿಯ ಆನರ್ಸ್ ಪದವಿ ಕೋರ್ಸ್ ಆರಂಭಿಸುವ ತೀರ್ಮಾನವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ತಡೆಹಿಡಿಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಎನ್‌ಇಪಿ ಅನುಷ್ಠಾನವನ್ನು ಕೈಬಿಟ್ಟು, ಪ್ರತ್ಯೇಕವಾದ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆದಿದೆ. ಅದಕ್ಕೆ ಪೂರಕವಾಗಿ ನಾಲ್ಕು ವರ್ಷಗಳ ಪದವಿ ಕೋರ್ಸ್ ಪರಿಚಯಿಸುವ ಹಿಂದಿನ ಸರ್ಕಾರದ ನಿರ್ಧಾರವನ್ನು ಕೈಬಿಡುವ ದಿಸೆಯಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ.
ಈಗ ಇರುವಂತೆಯೇ ಸಾಂಪ್ರದಾಯಿಕವಾಗಿ ಮೂರು ವರ್ಷಗಳ ಪದವಿ ಕೋರ್ಸ್ ಮುಂದುವರಿಸಲು ಸರ್ಕಾರ ಒಲವು ತೋರಿದೆ. ಪದವಿ ತರಗತಿಗಳ ಆರಂಭಕ್ಕೆ ಪೂರ್ವಭಾವಿಯಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿರುವ ಉನ್ನತ ಶಿಕ್ಷಣ ಇಲಾಖೆ, ಐದು ಮತ್ತು ಆರನೇ ಸೆಮಿಸ್ಟರ್‌ಗಳಿಗೆ ಮಾತ್ರ ಪಠ್ಯಕ್ರಮ ರೂಪಿಸುವಂತೆ ಸೂಚಿಸಿದೆ.
ಎನ್‌ಇಪಿ ಅಡಿಯಲ್ಲಿ ನಾಲ್ಕು ವರ್ಷಗಳ ಅವಧಿಯ ಆನರ್ಸ್ ಪದವಿ ತರಗತಿಗಳನ್ನು ಆರಂಭಿಸುವ ಪ್ರಸ್ತಾವವಿದೆ. ಆನರ್ಸ್ ಪದವಿ ಪಡೆದವರು ಪಿಎಚ್.ಡಿ ಸಂಶೋಧನೆಗೆ ನೋಂದಾಯಿಸಿಕೊಳ್ಳಲು ಅರ್ಹರು ಎಂಬ ಅಂಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ.
‘ನಾಲ್ಕು ವರ್ಷದ ಆನರ್ಸ್ ಪದವಿ ಕೋರ್ಸ್‌ನ ಅಗತ್ಯವಿಲ್ಲ ಎಂದು ಕೆಲವು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗ ಐದು ಮತ್ತು ಆರನೇ ಸೆಮಿಸ್ಟರ್‌ಗೆ ಮಾತ್ರ ಪಠ್ಯಕ್ರಮ ರೂಪಿಸುವಂತೆ ಸುತ್ತೋಲೆ ನೀಡಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಸದ್ಯಕ್ಕೆ ನಾಲ್ಕು ವರ್ಷಗಳ ಪದವಿ ಕೋರ್ಸ್ ಆರಂಭಿಸುವ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಈಗಿನ ವೇಳಾಪಟ್ಟಿ ಪ್ರಕಾರ, 2024ರ ಜೂನ್ ಅಥವಾ ಜುಲೈ ತಿಂಗಳಲ್ಲಿ ನಾಲ್ಕು ವರ್ಷಗಳ ಅವಧಿಯ ಆನರ್ಸ್ ಪದವಿ ಕೋರ್ಸ್ ಆರಂಭವಾಗಬೇಕು. ಮುಂದಿನ ಕೆಲವು ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ವೈ.ಎಸ್. ಸಿದ್ದೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.