ADVERTISEMENT

ವನ್ಯಜೀವಿ ಮಂಡಳಿಗೆ ಸಚಿವರಾದ ಎಂ.ಬಿ. ಪಾಟೀಲ, ವಿನಯ್ ಕುಲಕರ್ಣಿ ಮಕ್ಕಳು!

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:36 IST
Last Updated 26 ಜುಲೈ 2024, 15:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಮಗ ಧ್ರುವ್‌ ಎಂ.ಪಾಟೀಲ ಮತ್ತು ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅವರ ಮಗಳು ವೈಶಾಲಿ ಕುಲಕರ್ಣಿ ಅವರನ್ನು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಮೂರು ವರ್ಷಗಳ ಅವಧಿಗೆ ಮಂಡಳಿಯನ್ನು ಪುನರ್ ರಚಿಸಲಾಗಿದ್ದು, ತಜ್ಞರು ಮತ್ತು ಪರಿಸರವಾದಿಗಳ ಕೋಟಾದಡಿ ಶಾಸಕ ಮತ್ತು ಸಚಿವರ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಮಂಡಳಿಗೆ ಮುಖ್ಯಮಂತ್ರಿ ಅಧ್ಯಕ್ಷರಾದರೆ, ಅರಣ್ಯ ಸಚಿವರು ಉಪಾಧ್ಯಕ್ಷರಾಗಿದ್ದಾರೆ. ಸದಸ್ಯರ ನೇಮಕಾತಿ ಎಂಟು ತಿಂಗಳಿನಿಂದ ಆಗಿರಲಿಲ್ಲ. ಹತ್ತು ಸದಸ್ಯರನ್ನು ನೇಮಿಸಿ ಅರಣ್ಯ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ಶಾಸಕರ ಕೋಟಾದಡಿ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಎಂ. ಪಟ್ಟಣ, ಗುಂಡ್ಲುಪೇಟೆ ಶಾಸಕ ಎಚ್‌.ಎಂ.ಗಣೇಶಪ್ರಸಾದ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಸರ್ಕಾರೇತರ ಸಂಸ್ಥೆಗಳ ಕೋಟಾದಡಿ ವೈಲ್ಡ್‌ಲೈಫ್‌ ಅಸೋಸಿಯೇಷನ್‌ ಆಫ್ ಸೌತ್ ಇಂಡಿಯಾದ ಸುಶೀಲ್ ಗ್ಯಾನ್‌ಚಂದ್‌, ಟೈಗರ್ಸ್‌ ಅನ್‌ಲಿಮಿಟೆಡ್‌ ವೈಲ್ಡ್‌ಲೈಫ್ ಸೊಸೈಟಿಯ ಸೀಮಾ ಬೇಗಂ ಖಲೀಲ್, ಬೆಂಗಳೂರು ಪರಿಸರ ಟ್ರಸ್ಟ್‌ನ ಡಾ.ಆರ್‌.ವಿ.ದಿನೇಶ್‌ ಅವರನ್ನು ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರ ತಜ್ಞರು ಹಾಗೂ ಪರಿಸರವಾದಿಗಳ ಕೋಟಾದಡಿ ರವೀಂದ್ರ ರಘುನಾಥ್ ಹಾಗೂ ಚಿಕ್ಕಣ್ಣ (ಪರಿಶಿಷ್ಟ ಪಂಗಡದ ಕೋಟಾ), ಡಾ.ರಾಜ್‌ಕುಮಾರ್ ಎಸ್‌.ಅಲ್ಲೆ, ಸಂಕೇತ್‌ ಪೂವಯ್ಯ, ವೈಶಾಲಿ ಕುಲಕರ್ಣಿ, ಅಜಿತ್ ಕರಿಗುಡ್ಡಯ್ಯ, ವಿನಯ್‌ ಕುಮಾರ್ ಮಾಳಿಗೆ, ಡಾ.ಸಂತೃಪ್ತ್, ಧ್ರುವ್‌ ಎಂ.ಪಾಟೀಲ, ಮಲ್ಲಪ್ಪ ಎಸ್‌.ಅಂಗಡಿ ಅವರನ್ನು ನೇಮಕ ಮಾಡಲಾಗಿದೆ.

ಮಂಡಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು, ಸಂಸ್ಥೆಗಳ ಹತ್ತು ಅಧಿಕಾರಿಗಳು ಪದನಿಮಿತ್ತ ಸದಸ್ಯರಾಗಿದ್ದಾರೆ. ರಾಜ್ಯದ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.