ADVERTISEMENT

ಮೌಲ್ಯಮಾಪನ ಕುಲಸಚಿವರ ವಿರುದ್ಧ ದೂರು

ಜಾನಪದ ವಿವಿ: ಲೈಂಗಿಕ ದೌರ್ಜನ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 19:05 IST
Last Updated 27 ಜನವರಿ 2019, 19:05 IST

ಗೊಟಗೋಡಿ (ಹಾವೇರಿ ಜಿಲ್ಲೆ):ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಎಂ.ಎನ್. ವೆಂಕಟೇಶ್ ವಿರುದ್ಧ, ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಜನವರಿ 6ರಂದು ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

‘ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಕೆಲವು ದಿನಗಳ ಬಳಿಕ, ನೊಂದ ಮಹಿಳೆ ಹಾಗೂ ಅವರ ಪತಿ ಈ ಬಗ್ಗೆ ಮೌಖಿಕವಾಗಿ ತಿಳಿಸಿದ್ದರು. ಯಾವುದೇ ಲಿಖಿತ ದೂರು ನೀಡಿರಲಿಲ್ಲ. ಮೌಲ್ಯಮಾಪನ ಕುಲಸಚಿವರು ತಪ್ಪೊಪ್ಪಿಕೊಂಡಿದ್ದು, ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿಯೂ ಅವರೇ ಹೇಳಿದ್ದರು. ಆದರೆ, ಜ.21ರಂದು ಅಂಚೆ ಮೂಲಕ ದೂರಿನ ಪತ್ರ ಬಂದಿದೆ. ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ಸಲುವಾಗಿ ಪತ್ರವನ್ನು ವಿಶ್ವವಿದ್ಯಾಲಯದ ಮಹಿಳಾ ದೌರ್ಜನ್ಯ ತಡೆ ಸಮಿತಿಗೆ ನೀಡಲಾಗಿದೆ. ಸಮಿತಿ ನೀಡಿದ ವರದಿಯನ್ನು ಸಿಂಡಿಕೇಟ್‌ ಮುಂದೆ ಇರಿಸಿ, ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಕುಲಪತಿ ಡಾ.ಡಿ.ಬಿ. ನಾಯಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಆದರೆ, ಪ್ರಕರಣದ ವಿಚಾರಣೆ ನಡೆಸಬೇಕಾಗಿದ್ದ ಮಹಿಳಾ ದೌರ್ಜನ್ಯ ತಡೆ ಸಮಿತಿಯ ಸದಸ್ಯರಿಬ್ಬರು ತಮ್ಮತಮ್ಮಲ್ಲೇ ಹೊಡೆದಾಡಿಕೊಂಡಿದ್ದು, ಈ ಬಗ್ಗೆ ಶಿಗ್ಗಾವಿ ಠಾಣೆಯಲ್ಲಿ ದೂರು–ಪ್ರತಿದೂರು ದಾಖಲಾಗಿದೆ.

‘ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಹಿಳಾ ದೌರ್ಜನ್ಯ ಸಮಿತಿ ಸದಸ್ಯರಿಬ್ಬರು ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಆದರೆ, ಲೈಂಗಿಕ ದೌರ್ಜನ್ಯ ಆರೋಪ ಕುರಿತು ಯಾವುದೇ ದೂರು ದಾಖಲಾಗಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ತಿಳಿಸಿದ್ದಾರೆ.

ತಪ್ಪೊಪ್ಪಿಗೆ?:ಈ ನಡುವೆಯೇ ಪ್ರಕರಣ ಕುರಿತು ಮೌಲ್ಯಮಾಪನ ಕುಲಸಚಿವ ಡಾ.ಎಂ.ಎನ್. ವೆಂಕಟೇಶ್‌ ಅವರು, ನೊಂದ ಮಹಿಳೆಗೆ ತಪ್ಪೊಪ್ಪಿಗೆ ನೀಡಿದ್ದಾರೆ ಎನ್ನಲಾದ ಪತ್ರವೊಂದು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.