ಯಲಹಂಕ: ವೆಂಕಟಾಲದಲ್ಲಿರುವ ಅಭಯ ಮಹಾಗಣಪತಿ ದೇವಾಲಯದ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಕಾರ್ತಿಕ ದೀಪೋತ್ಸವವನ್ನು ಏರ್ಪಡಿಸಲಾಗಿತ್ತು.
ವಿಘ್ನೇಶ್ವರನಿಗೆ ವಿಶೇಷ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ದೇವಸ್ಥಾನದ ಎದುರಿನಲ್ಲಿ ಸ್ಥಾಪಿಸಿದ್ದ ಪ್ರಧಾನದೀಪವನ್ನು ಹಚ್ಚುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಭಕ್ತರು ಎರಡೂ ರಸ್ತೆಗಳಲ್ಲಿ ಸಾಲಾಗಿ ಜೋಡಿಸಿದ್ದ ದೀಪಗಳನ್ನು ಬೆಳಗುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಿದರು. ಏಕಕಾಲದಲ್ಲಿ ರಸ್ತೆಯುದ್ದಕ್ಕೂ ಬೆಳಗುತ್ತಿದ್ದ ದೀಪಗಳು ಜನರನ್ನು ಆಕರ್ಷಿಸಿದವು. ಅಲ್ಲದೆ ಚಿತ್ತಾರದ ರಂಗೋಲಿಗಳು ಗಮನ ಸೆಳೆದವು.
ಪಾಲಿಕೆ ಮಾಜಿ ಸದಸ್ಯೆ ಚಂದ್ರಮ್ಮ ಕೆಂಪೇಗೌಡ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆಂಪೇಗೌಡ, ಸ್ಥಳೀಯ ಮುಖಂಡರಾದ ಚಂದ್ರಯ್ಯ, ಈಶ್ವರ್, ಸುರೇಶ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.