ADVERTISEMENT

‘ಅನುವಾದದ ಮೂಲಕ ವಿಶ್ವಕ್ಕೆ ಕನ್ನಡದ ಕಂಪು’

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 19:17 IST
Last Updated 20 ಜುಲೈ 2018, 19:17 IST
‘ಕರ್ವಾಲೊ’ ಕಾದಂಬರಿಯ ಜರ್ಮನ್‌ ಅನುವಾದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಬಿ.ಎ.ವಿವೇಕ ರೈ, ರಾಜೇಶ್ವರಿ ತೇಜಸ್ವಿ, ಕತ್ರೀನ್‌ ಬೈಂದರ್‌, ಬಿ.ಎಲ್‌. ಶಂಕರ್‌, ಎನ್‌.ಆರ್‌. ವಿಶುಕುಮಾರ್‌ ಹಾಗೂ ಡಾ. ಕ್ಲಾಸ ಹೇಮಿಸ್‌ –ಪ್ರಜಾವಾಣಿ ಚಿತ್ರ
‘ಕರ್ವಾಲೊ’ ಕಾದಂಬರಿಯ ಜರ್ಮನ್‌ ಅನುವಾದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಬಿ.ಎ.ವಿವೇಕ ರೈ, ರಾಜೇಶ್ವರಿ ತೇಜಸ್ವಿ, ಕತ್ರೀನ್‌ ಬೈಂದರ್‌, ಬಿ.ಎಲ್‌. ಶಂಕರ್‌, ಎನ್‌.ಆರ್‌. ವಿಶುಕುಮಾರ್‌ ಹಾಗೂ ಡಾ. ಕ್ಲಾಸ ಹೇಮಿಸ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಯುರೋಪಿನ ಅನೇಕ ದೇಶಗಳ ಜನರಿಗೆ ಕನ್ನಡ ಎನ್ನುವ ಭಾಷೆ ಇರುವುದೇ ಗೊತ್ತಿಲ್ಲ. ನಮ್ಮಲ್ಲಿನ ಪ್ರಮುಖ ಕೃತಿಗಳನ್ನು ಇಂಗ್ಲಿಷ್‌ ಹಾಗೂ ವಿಶ್ವದ ವಿವಿಧ ಭಾಷೆಗಳಿಗೆ ಅನುವಾದಿಸುವ ಮೂಲಕ ಕನ್ನಡದಲ್ಲಿ ಆಗಿರುವ ಕೆಲಸವನ್ನು ವಿಶ್ವಕ್ಕೆ ತಿಳಿಸಬೇಕಿದೆ ಎಂದು ಸಾಹಿತಿ ಬಿ.ಎ. ವಿವೇಕ ರೈ ಹೇಳಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ ಹಮ್ಮಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೊ ಕಾದಂಬರಿಯ ಜರ್ಮನ್‌ ಅನುವಾದಿತ ‘Die Fliegende Eideshse' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು. ‘ತಮಿಳಿನ ತಿರುಕ್ಕುರುಳ್ ಕಾವ್ಯ 82 ಭಾಷೆಗಳಿಗೆ ಅನುವಾದ ಆಗಿದೆ. ಆದರೆ ಕನ್ನಡದ ಪಂಪಭಾರತ ಈವರೆಗೆ ಯಾವ ಭಾಷೆಗೂ ಅನುವಾದ ಆಗಿಲ್ಲ’ ಎಂದರು.

‘ಕರ್ವಾಲೊ’ ಕೃತಿಯ ಪಾಠ ಮಾಡಿದ್ದನ್ನು ನೆನಪಿಸಿಕೊಂಡ ಅವರು, ಈಗ ಜರ್ಮನ್‌ ಅನುವಾದದ ಮೂಲಕ ತೇಜಸ್ವಿ ಅವರನ್ನು ಜರ್ಮನ್ನರಿಗೆ ಪರಿಚಯಿಸಿದ ಸಂತಸವನ್ನು ಹಂಚಿಕೊಂಡರು.

ADVERTISEMENT

ಜರ್ಮನಿಯ ‘ದ್ರೌಪದಿ ಪ್ರಕಾಶನ’ ಅನುವಾದ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಕರ್ನಾಟಕ ಸರ್ಕಾರ ಧನಸಹಾಯ ನೀಡಿದ್ದು, ಸರ್ಕಾರದಿಂದ ಅನುದಾನ ದೊರೆತರೆ ಇನ್ನಷ್ಟು ಕನ್ನಡ ಕೃತಿಗಳು ಜರ್ಮನ್‌ ಭಾಷೆಗೆ ಅನುವಾದಗೊಳ್ಳಬಹುದು ಎನ್ನುವ ಆಶಯವನ್ನು ಅವರು ವ್ಯಕ್ತಪಡಿಸಿದರು.

ಬಾಂಧವ್ಯದ ಹೊಸ ಕೊಂಡಿ: ಪುಸ್ತಕ ಬಿಡುಗಡೆ ಮಾಡಿದ ರಾಜೇಶ್ವರಿ ತೇಜಸ್ವಿ(ತೇಜಸ್ವಿ ಪತ್ನಿ) ಅವರು, ‘ಈ ಅನುವಾದ ಪ್ರಯತ್ನ ಕನ್ನಡ ಮತ್ತು ಜರ್ಮನ್‌ ಭಾಷೆಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಪ್ರಯತ್ನ’ ಎಂದು ಅಭಿಪ್ರಾಯಪಟ್ಟರು. 1980ರಲ್ಲಿ ‘ಕರ್ವಾಲೊ’ ಮೊದಲ ಆವೃತ್ತಿಯ ಪ್ರಕಟಣೆಯ ಸಂದರ್ಭವನ್ನು ಮೆಲುಕು ಹಾಕಿದ ಅವರು, ಅಂದಿನಿಂದ ಇಂದಿನವರೆಗೆ ಕಾದಂಬರಿಯ ಬಗ್ಗೆ ಓದುಗರು ವ್ಯಕ್ತಪಡಿಸಿರುವ ಪ್ರೀತಿ–ಅಭಿಮಾನವನ್ನು ನೆನಪಿಸಿಕೊಂಡರು.

ವಿವೇಕ ರೈ ಅವರೊಂದಿಗೆ ‘ಕರ್ವಾಲೊ’ ಕೃತಿಯನ್ನು ಅನುವಾದಿಸಿರುವ ಜರ್ಮನ್‌ ಲೇಖಕಿ ಕತ್ರೀನ್ ಬೈಂದರ್, ‘ಕನ್ನಡ ಮತ್ತು ಜರ್ಮನಿ ಭಾಷೆಯ ಲಯ ಸಂಪೂರ್ಣ ಭಿನ್ನವಾದುದು. ಕನ್ನಡ ಕೃತಿಯಲ್ಲಿನ ಕೆಲವು ಸಂಗತಿಗಳನ್ನು ಜರ್ಮನ್‌ ಭಾಷೆಯಲ್ಲಿ ಪುನರ್‌ಸೃಷ್ಟಿಸಲು ಅಸಾಧ್ಯ. ಆದರೂ ಮೂಲಕ್ಕೆ ಆದಷ್ಟೂ ಬದ್ಧವಾಗಿರುವ ಪ್ರಯತ್ನ ನಡೆಸಿದ್ದೇವೆ’ ಎಂದು ಹೇಳಿದರು.

ಜರ್ಮನ್‌ ಭಾಷೆಯಲ್ಲಿ ಕನ್ನಡದ ಕರ್ವಾಲೊ ಸೊಗಸಾಗಿ ರೂಪುಗೊಂಡಿದ್ದಾನೆ ಎಂದು ಬೆಂಗಳೂರಿನ ಮ್ಯಾಕ್ಸ್‌ಮುಲ್ಲರ್‌ ಭವನದ ನಿರ್ದೇಶಕ ಡಾ. ಕ್ಲಾಸ‌‌ ಹೇಮಿಸ್, ಅನುವಾದವನ್ನು ಮೆಚ್ಚಿಕೊಂಡರು.
**
‘ನಾಡೋಜ’ ಒಪ್ಪದ ತೇಜಸ್ವಿ
ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಗೌರವವನ್ನು ತೇಜಸ್ವಿ ಅವರು ನಿರಾಕರಿಸಿದ ಸಂಗತಿಯನ್ನು ವಿವೇಕ ರೈ ನೆನಪಿಸಿಕೊಂಡರು. ‘ನಾನು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ತೇಜಸ್ವಿ ಅವರ ಮನವೊಲಿಸಲು ಅವರ ಮನೆಗೆ ಹೋಗಿದ್ದೆ. ಅವರಿಗೆ ನಾಡೋಜ ಗೌರವ ನೀಡುವ ನಿರ್ಣಯವನ್ನು ತಿಳಿಸಿ, ಒಪ್ಪಿಕೊಳ್ಳುವಂತೆ ಒತ್ತಾಯಿಸಿದೆ. ಅವರು ಒಳ್ಳೆಯ ಊಟ ಹಾಕಿಸಿದರು. ಆದರೆ, ಗೌರವ ಒಪ್ಪಿಕೊಳ್ಳಲು ನಿರಾಕರಿಸಿದರು’ ಎಂದು ಹೇಳಿದರು.

‘ನನಗೆ ನಾಡೋಜ ಗೌರವ ನೀಡುವ ಬದಲು ವಿಶ್ವವಿದ್ಯಾಲಯದಿಂದ ಕನ್ನಡ ತಂತ್ರಾಂಶ ರೂಪಿಸಿ’ ಎಂದು ತೇಜಸ್ವಿ ಹೇಳಿದ ಮಾತನ್ನು ಸ್ಮರಿಸಿಕೊಂಡ ಅವರು, ‘ತೇಜಸ್ವಿ ಅವರ ಬರಹ ಬದುಕು ಎರಡೂ ಒಂದೇ ಆಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.