ಬೆಂಗಳೂರು: ಉತ್ತರ ವಿಭಾಗದ ಸಂಜಯ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ಕೆಎಎಸ್ ಅಧಿಕಾರಿ ಶಿವಕುಮಾರ್ ಅವರ ಪತ್ನಿ, ಹೈಕೋರ್ಟ್ ವಕೀಲೆ ಚೈತ್ರಾವತಿಗೌಡ (34) ಅವರು ಅನುಮಾನಸ್ಪದ ರೀತಿಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.
ಫ್ಯಾನ್‌ಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚೈತ್ರಾವತಿಗೌಡ ಅವರು ಹೈಕೋರ್ಟ್ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರ ಪತಿ ಶಿವಕುಮಾರ್ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ಸಹಾಯಕ ಆಯುಕ್ತರಾಗಿದ್ದು, ಚೈತ್ರಾವತಿಗೌಡ ಅವರು ಕುಣಿಗಲ್‌ನವರು. ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಐದು ವರ್ಷದ ಹೆಣ್ಣುಮಗುವಿದೆ.
ಚೈತ್ರಾವತಿಗೌಡ ಅವರ ಸಹೋದರ ದೂರು ನೀಡಿದ್ದು, ಶಂಕಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸಹೋದರ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಫ್ಯಾನ್‌ಗೆ ಸೀರೆಯಿಂದ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹವಿತ್ತು ಎಂದು ಪೊಲೀಸರು ಹೇಳಿದರು.
ಮೂರು ಅಂತಸ್ತಿನ ಅಪಾರ್ಟ್‌ಮೆಂಟ್‌ನ ಎರಡನೇ ಫ್ಲ್ಯಾಟ್‌ನಲ್ಲಿ ಚೈತ್ರಾವತಿಗೌಡ ಅವರ ಕುಟುಂಬಸ್ಥರು ವಾಸವಾಗಿದ್ದರು. ಇನ್ನೊಂದು ಫ್ಲ್ಯಾಟ್‌ನಲ್ಲಿ ಮೃತಳ ಸಹೋದರ ವಾಸವಿದ್ದರು ಎಂದು ಮೂಲಗಳು ಹೇಳಿವೆ.
‘ನನ್ನ ಪತಿ ಒಳ್ಳೆಯವರು, ಜೀವನ ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಡಿಪ್ರೆಶನ್‌ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರಬರಲು ಪ್ರಯತ್ನಿಸಿದರು ಆಗಲಿಲ್ಲ. ನನ್ನ ಜೀವನ ಕೊನೆಗೊಳಿಸುತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದೆ. ಆದರೂ ನನ್ನ ಜೀವನ ಅಂತ್ಯ ಮಾಡುತ್ತಿದ್ದೇನೆ’ ಎಂದು ಕೆಲವು ದಿನಗಳ ಹಿಂದೆ ಬರೆದಿರುವ ಪತ್ರವೊಂದು ಸಿಕ್ಕಿದೆ ಎನ್ನಲಾಗಿದೆ.
‘ಸಿಕ್ಕಿರುವ ಪತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಡೆತ್‌ನೋಟ್ ಅನ್ನು ಅವರೇ ಬರೆದಿದ್ದಾರೆಯೇ? ಬೇರೆಯವರು ಬರೆದು ಅಲ್ಲಿಟ್ಟಿದ್ದರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಬ್ಯಾಡ್ಮಿಂಟನ್ ಆಟಗಾರ್ತಿಯೂ ಆಗಿದ್ದ ಚೈತ್ರಾವತಿಗೌಡ ಸಾವಿನ ಪ್ರಕರಣದ ತನಿಖೆಗೆ ಎಲ್ಲ ರೀತಿಯ ಕ್ರಮ ಕೈಗೊಂಡು ಸೂಕ್ತ ನ್ಯಾಯ ಒದಗಿಸಬೇಕು ಎಂದು ಬೆಂಗಳೂರು ವಕೀಲರ ಸಂಘ ಆಗ್ರಹಿಸಿದೆ.
ಈ ಕುರಿತಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಹಾಗೂ ಖಜಾಂಚಿ ಎಂ.ಟಿ.ಹರೀಶ್, ‘ಈ ಸಾವು ಇಡೀ ವಕೀಲ ವೃಂದಕ್ಕೆ ಆಘಾತವುಂಟು ಮಾಡಿದೆ’ ಎಂದು ಹೇಳಿದ್ದಾರೆ.
‘ಆಕೆಯ ಸ್ನೇಹಿತೆಯರಿಂದ ನಮಗೆ ತಿಳಿದು ಬಂದಿರುವಂತೆ ಚೈತ್ರಾ ಅವರು ಅತ್ಯಂತ ಬಲಿಷ್ಠ ಮನಸ್ಥಿತಿ ಹೊಂದಿದವರಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮಹಿಳೆ ಆಗಿರಲಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.