ADVERTISEMENT

ಶಾಸ್ತ್ರೀಯ ಭಾಷೆ: ಸೌಲಭ್ಯಕ್ಕೆ ಕಸಾ‍ಪ ಆಗ್ರಹ, ಸಂಸದರಿಗೆ ಮಹೇಶ ಜೋಶಿ ಪತ್ರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:31 IST
Last Updated 29 ಜನವರಿ 2022, 19:31 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ‘ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತು 13 ವರ್ಷಗಳಾಗಿವೆ. ಆದರೆ, ಈವರೆಗೂ ಭಾಷೆಗೆ ದಕ್ಕಬೇಕಾದ ಅನುದಾನ ಮತ್ತು ಆಡಳಿತ ಸಂಬಂಧಿ ಸೌಲಭ್ಯಗಳು ದೊರೆತಿಲ್ಲ. ಈಗಲಾದರೂ ಕನ್ನಡಕ್ಕೆ ನ್ಯಾಯ ಒದಗಿಸಿಕೊಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೇಂದ್ರ ಸಚಿವರು,ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ರಾಜ್ಯಸಭೆ ಸದಸ್ಯರಿಗೂ ಅವರು ಈ ಬಗ್ಗೆ ಪತ್ರ ಬರೆದಿದ್ದಾರೆ.‘ಭಾರತೀಯ ಭಾಷೆಯೊಂದಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದರೆ ಕೇಂದ್ರ ಸರ್ಕಾರವು ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಭಾಷೆಯಲ್ಲಿನ ಪ್ರಾಚೀನ ಗ್ರಂಥಗಳ ಕುರಿತು ಸಂಶೋಧನೆ ನಡೆಸಲು ‘ಶಾಸ್ತ್ರೀಯ ಉನ್ನತ ಅಧ್ಯಯನ ಕೇಂದ್ರ’ವನ್ನು ಸ್ಥಾಪಿಸಬೇಕಾಗುತ್ತದೆ. ಇದು ಸ್ವಾಯತ್ತ ಸಂಸ್ಥೆಯಾಗಿರುತ್ತದೆ. ಆದರೆ, ಇಲ್ಲಿ ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರವನ್ನು 13 ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರವು ಸದ್ಯ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರದ ನಿರ್ದೇಶಕರಾಗಿದ್ದ ಡಿ.ಜಿ. ರಾವ್ ಅವರು 2019ರಲ್ಲಿ ‘ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವ ಮಟ್ಟಕ್ಕೆ ಕನ್ನಡ ಭಾಷೆ ಬೆಳೆದಿಲ್ಲ’ ಎಂಬ ಘಾತುಕವಾದ ವರದಿಯನ್ನು ನೀಡಿ, ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದು ಕನ್ನಡದ ಬೆಳವಣಿಗೆಗೆ ಕೊಡಲಿ ಪೆಟ್ಟು ನೀಡಿದೆ’ ಎಂದು ಹೇಳಿದ್ದಾರೆ.

ADVERTISEMENT

ಅನುದಾನದಲ್ಲಿ ತಾರತಮ್ಯ:‘ಕನ್ನಡ, ತೆಲುಗು, ಮಲಯಾಳ ಮತ್ತು ಒರಿಯಾ ಶಾಸ್ತ್ರೀಯ ಭಾಷೆಗಳಿಗೆ ವಾರ್ಷಿಕವಾಗಿಭಾರತೀಯ ಭಾಷಾ ಸಂಸ್ಥಾನಕ್ಕೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.ಪ್ರತಿ ವರ್ಷ ಕನಿಷ್ಠ ₹ 100 ಕೋಟಿ ಅನುದಾನ ಪಡೆಯಬೇಕಾಗಿದ್ದ ಕನ್ನಡಕ್ಕೆ ಕಳೆದ 13 ವರ್ಷಗಳಿಂದ ದಕ್ಕಿರುವುದು ಕೇವಲ ₹ 8 ಕೋಟಿ ಮಾತ್ರ. ಈ ಅವಧಿಯಲ್ಲಿ ತಮಿಳಿಗೆ ₹ 50 ಕೋಟಿ ಅನುದಾನ ದೊರೆತಿದೆ. ಸಂಸ್ಕೃತವು ₹ 1200 ಕೋಟಿ ಅನುದಾನ ಪಡೆದುಕೊಂಡಿದೆ.ಕನ್ನಡಕ್ಕೆ ದೊರೆತಿರುವ ಅನುದಾನ ಉನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರು, ಆಡಳಿತ ಸಿಬ್ಬಂದಿ ಮತ್ತು 15 ಮಂದಿ ಸಂಶೋಧಕರ ಸಂಬಳ, ಸಾರಿಗೆಗೂ ಸಾಕಾಗುತ್ತಿಲ್ಲ’ ಎಂದು ತಿಳಿಸಿದ್ದಾರೆ.

‘ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ಅಗತ್ಯ’

‘ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರವನ್ನು ಅದರಿಂದ ಪ್ರತ್ಯೇಕಿಸಬೇಕು. ಈಕೇಂದ್ರಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯ ನೀಡಿರುವ ನಾಲ್ಕು ಎಕರೆ ನಿವೇಶನದಲ್ಲಿ ಹೊಸ ಸುಸಜ್ಜಿತ ಕಟ್ಟಡದ ನಿರ್ಮಾಣವಾಗಬೇಕು.ತಾರತಮ್ಯ ಮಾಡದೆ ಬೇರೆ ಶಾಸ್ತ್ರೀಯ ಭಾಷೆಗಳಾದ ಸಂಸ್ಕೃತ ಮತ್ತು ತಮಿಳಿಗೆ ನೀಡಿರುವಷ್ಟೇ ಅನುದಾನವನ್ನು ಕನ್ನಡಕ್ಕೂ ನೀಡಬೇಕು. ಪ್ರಕಟಣೆ, ಸಂಶೋಧನೆ, ಕ್ಷೇತ್ರಕಾರ್ಯವನ್ನು ವ್ಯಾಪಕವಾಗಿ ಕೈಗೊಳ್ಳಲು ನೆರವಾಗುವ ಸಲುವಾಗಿ ಬಾಕಿ ಅನುದಾನವನ್ನು ಒದಗಿಸಬೇಕು’ ಎಂದು ಮಹೇಶ ಜೋಶಿ ಪತ್ರದಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.