ADVERTISEMENT

ಬೆಂಗಳೂರು | ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಲು ಆಗ್ರಹಿಸಿ ಪ್ರತಿಭಟನೆ

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:33 IST
Last Updated 21 ನವೆಂಬರ್ 2024, 15:33 IST
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಅರಣ್ಯ ಭೂಮಿ ಹಕ್ಕುಗಳ ಹೋರಾಟಗಾರರ ವೇದಿಕೆ ಸದಸ್ಯರು ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಅರಣ್ಯ ಭೂಮಿ ಹಕ್ಕುಗಳ ಹೋರಾಟಗಾರರ ವೇದಿಕೆ ಸದಸ್ಯರು ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಸ್ತೂರಿ ರಂಗನ್‌ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

‘ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಅರಣ್ಯವಾಸಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕರಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಶಿಫಾರಸು ಮಾಡಿದೆ. ಅವೈಜ್ಞಾನಿಕವಾಗಿರುವ ಈ ವರದಿ ಜನಜೀವನಕ್ಕೆ ಮಾರಕವಾಗಿದ್ದು, ವಾಸ್ತವಕ್ಕೆ ವಿರುದ್ಧವಾಗಿದೆ. ಆದ್ದರಿಂದ ಈ ವರದಿಯನ್ನು ಕೇಂದ್ರ ಸರ್ಕಾರವೂ ತಿರಸ್ಕರಿಸಬೇಕು. ಇಲ್ಲದಿದ್ದರೆ, ಡಿಸೆಂಬರ್‌ನಲ್ಲಿ ದೆಹಲಿ ಚಲೋ ಹಮ್ಮಿಕ್ಕೊಳ್ಳಲಾಗುವುದು’ ಎಂದು ಪ್ರತಿಭಟನಕಾರರು ಹೇಳಿದರು.

ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ‘ರಾಜ್ಯ ಸರ್ಕಾರ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಮಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಕಾನೂನುಗಳನ್ನು ಅನುಸರಿಸದೇ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ರಾಜ್ಯದ ಬುಡಕಟ್ಟು ಪಂಗಡದವರಿಗೆ 12,481, ಪಾರಂಪರಿಕ ಅರಣ್ಯವಾಸಿಗಳಿಗೆ 1,976, ಸಮೂಹ ಉದ್ದೇಶಕ್ಕೆ 1,341 ಸೇರಿದಂತೆ ಒಟ್ಟು 15,798 ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗಿದೆ’ ಎಂದರು.

ADVERTISEMENT

‘ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಗುಜರಾತ್‌ ಹೈಕೋರ್ಟ್‌ನ ಆದೇಶದಂತೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಮೂರು ತಲೆಮಾರಿನಿಂದ ಜಮೀನಿನಲ್ಲಿ ನೆಲೆಸಿರುವುದನ್ನು ದೃಢಪಡಿಸುವ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ’ ಎಂದರು.

‘1996ರ ಅರಣ್ಯ ಸಂರಕ್ಷಣಾ ಕಾಯ್ದೆ ಕಲಂ 2ರಂತೆ ಕರ್ನಾಟಕ ರಾಜ್ಯದಲ್ಲಿ 14,848.83 ಹೆಕ್ಟೇರ್ ಪ್ರದೇಶವನ್ನು 19,348 ಅರಣ್ಯವಾಸಿಗಳ ಕುಟುಂಬಕ್ಕೆ ಷರತ್ತುಬದ್ಧವಾಗಿ ಮಂಜೂರು ಮಾಡಲಾಗಿತ್ತು. ಆದರೆ, ಇದುವರೆಗೂ ಹಕ್ಕು ಪತ್ರಗಳನ್ನು ವಿತರಿಸಿಲ್ಲ. ಅರಣ್ಯ ಪ್ರದೇಶದಲ್ಲಿನ ಸಾಗುವಳಿ ಜಮೀನಿನಲ್ಲಿ ಅಸಮರ್ಪಕ ಜಿಪಿಎಸ್‌ ಸರ್ವೆ ಮಾಡಲಾಗಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಸುಮಾರು 32 ಸಾವಿರ ಅರಣ್ಯವಾಸಿಗಳು ಪುನರ್‌ ಜಿಪಿಎಸ್‌ ಸರ್ವೆ ಮಾಡುವಂತೆ ಮೇಲ್ಮನವಿ ಸಲ್ಲಿಸಿದ್ದಾರೆ’ ಎಂದು ಹೇಳಿದರು.

‘ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ವಂಚಿತರಾದ ಎಲ್ಲ ಅರಣ್ಯವಾಸಿಗಳಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ನಮ್ಮನ್ನು ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸುವುದನ್ನು ತಡೆಯಬೇಕು. ಅರಣ್ಯ ಸಿಬ್ಬಂದಿ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು’ ಎಂದು ಆಗ್ರಹಿಸಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಉಪಸ್ಥಿತರಿದ್ದರು.

ಅರಣ್ಯವಾಸಿಗಳ ಜತೆ ಸರ್ಕಾರ: ಎಚ್.ಕೆ.ಪಾಟೀಲ

‘ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವವರೆಗೂ ನಿಮ್ಮ ಹೋರಾಟದ ಜೊತೆ ರಾಜ್ಯ ಸರ್ಕಾರ ಇರಲಿದೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡುವ ಕುರಿತು ಹೈಕೋರ್ಟ್‌ನಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಒಂದೆಡೆ ಸೇರಿಸಿ ಒಂದೇ ಬಾರಿ ವಿಚಾರಣೆ ನಡೆಸಬೇಕೆಂಬ ನ್ಯಾಯಾಲಯವನ್ನು ಕೋರುವ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

‘ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಗದಗ ತಾಲ್ಲೂಕಿನಲ್ಲಿ 1080 ಅರ್ಜಿಗಳಲ್ಲಿ 1028 ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕುಪತ್ರ ನೀಡಲಾಗಿದೆ. ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ 33 ಸಾರಿ ಹೋರಾಟ ನಡೆಸಿದರೂ ಇದುವರೆಗೂ ನಿಮಗೆ ಹಕ್ಕುಪತ್ರ ನೀಡದಿರುವುದು ದುರಂತ’ ಎಂದರು.

‘ಭೂ ಕಬಳಿಕೆ ನಿಷೇಧ ಕೋರ್ಟ್‌ ಅನ್ನು ಸರ್ಕಾರ ಸ್ಥಾಪಿಸಿದೆ. ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರ ವಿರುದ್ಧವೂ ಇಲ್ಲಿ ಅರಣ್ಯಾಧಿಕಾರಿಗಳು ಭೂಕಬಳಿಕೆ ಆರೋಪದಡಿ ಸಾವಿರಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಧಿಕಾರಿಗಳಿಗೆ ಭೂಕಬಳಿಕೆ ಮತ್ತು ಅನಧಿಕೃತ ಸಾಗುವಳಿಯ ವ್ಯತ್ಯಾಸವೇ ಗೊತ್ತಿಲ್ಲ. ಇಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಚಿಂತನೆ ನಡೆಸಿದೆ. ನಿಮಗೆ ನ್ಯಾಯ ಕೊಡಿಸುವುದಕ್ಕಾಗಿ ನಾನು ಸಮಾಜಕಲ್ಯಾಣ ಹಾಗೂ ಅರಣ್ಯ ಸಚಿವರು ಜಂಟಿ ಸಭೆ ನಡೆಸಿ ಚರ್ಚಿಸುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.