ADVERTISEMENT

ಸಂಭ್ರಮದ ನಡುವೆ ಬೆಂಗಳೂರು ನಗರಕ್ಕೆ ಹರಿಯಿತು ಕಾವೇರಿ

10 ವರ್ಷದ ಕನಸು ನನಸು ಮಾಡಿದ್ದೇವೆ –ಸಿ.ಎಂ * ಪಕ್ಷಭೇದ ಮರೆತು ಎಲ್ಲರ ಸಹಕಾರ –ಡಿ.ಸಿ.ಎಂ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 23:26 IST
Last Updated 16 ಅಕ್ಟೋಬರ್ 2024, 23:26 IST
ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿನ ಜಲಮಂಡಳಿ ಜಲಶುದ್ದೀಕರಣ ಘಟಕದಲ್ಲಿ ಬುಧವಾರ ಕಾವೇರಿ ಐದನೇ ಹಂತದ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಕಾವೇರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು –ಪ್ರಜಾವಾಣಿ ಚಿತ್ರ 
ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿನ ಜಲಮಂಡಳಿ ಜಲಶುದ್ದೀಕರಣ ಘಟಕದಲ್ಲಿ ಬುಧವಾರ ಕಾವೇರಿ ಐದನೇ ಹಂತದ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಕಾವೇರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು –ಪ್ರಜಾವಾಣಿ ಚಿತ್ರ     

ತೊರೆಕಾಡನಹಳ್ಳಿ (ಮಂಡ್ಯ): ಸಾಲುಬೆಟ್ಟಗಳ ಮೇಲೆ ಕಟ್ಟಿದ ಮೋಡಗಳ ತೋರಣ, ಸೂರ್ಯನಿಗೆ ಇಣುಕಲು ತುಸು ಬಿಡುವು ಕೊಟ್ಟ ಮಳೆರಾಯ, ಅಹ್ಲಾದಕರ ವಾತಾವರಣ, ಅದ್ಧೂರಿ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ಇಲ್ಲಿನ ಜಲಮಂಡಳಿ ಶುದ್ಧೀಕರಣ ಘಟಕದ ಅಂಗಳದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಕಾವೇರಿ 5ನೇ ಹಂತದ ಯೋಜನೆಗೆ ಬುಧವಾರ ಚಾಲನೆ ದೊರೆಯಿತು.

ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ವಿಶೇಷ ಪೂಜೆ, ಹೋಮಗಳು ನಡೆದವು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಯೋಜನೆಗೆ ಆರ್ಥಿಕ ಸಹಕಾರ ನೀಡಿರುವ ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿಯ (ಜೈಕಾ) ಪ್ರತಿನಿಧಿಗಳು, ಸ್ಥಳೀಯ ಶಾಸಕರು, ಸಚಿವರು ಸೇರಿ ಹಲವು ಗಣ್ಯರೂ ಭಾಗವಹಿಸಿದ್ದರು.

ಕಾವೇರಿ ಕಳಶಕ್ಕೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕಳಶದ ನೀರನ್ನು ಶುದ್ಧೀಕರಣ ಘಟಕಕ್ಕೆ ಸಮರ್ಪಿಸಿದರು. ಇಬ್ಬರೂ ಘಟಕದ ಮೇಲಿದ್ದ ಗುಂಡಿಗಳನ್ನು ಒತ್ತುವ ಮೂಲಕ ಐದನೇ ಹಂತದ ಯೋಜನೆಯಲ್ಲಿ ಬೆಂಗಳೂರಿಗೆ ನೀರು ಪೂರೈಕೆಗೆ ಚಾಲನೆ ನೀಡಿದರು. ನಂತರ, ಜಲಶುದ್ದೀಕರಣ ಘಟಕಕ್ಕೆ ಚಾಲನೆ ನೀಡಿದರು. ಯೋಜನೆಯ ಲೋಕಾರ್ಪಣೆ ನೆನಪಿಗಾಗಿ ಸಸಿಗಳನ್ನು ನೆಟ್ಟರು.

ADVERTISEMENT

‘ಎತ್ತಿನಹೊಳೆ, ಬೆಂಗಳೂರಿನ ಯಲಹಂಕದಲ್ಲಿರುವ ಅನಿಲ ಆಧಾರಿತ ವಿದ್ಯುತ್ ಯೋಜನೆ, ಕಾವೇರಿ 5ನೇ ಹಂತದ ಯೋಜನೆ, ಇವೆಲ್ಲ ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದು, ಈಗ ನಮ್ಮ ಸರ್ಕಾರವೇ ಇವೆಲ್ಲವನ್ನೂ ಲೋಕಾರ್ಪಣೆಗೊಳಿಸುತ್ತಿದೆ. 10 ವರ್ಷಗಳ ಹಿಂದೆ ಕಂಡಿದ್ದ ಕನಸನ್ನು ನನಸು ಮಾಡಿದ್ದೇವೆ’ ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದರು.

‘ಈ ಯೋಜನೆಗೆ ಪಕ್ಷಭೇದ ಮರೆತು ಎಲ್ಲಾ ನಾಯಕರು ಸಹಕಾರ ನೀಡಿದ್ದಾರೆ, ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಶಿವಕುಮಾರ್ ಹೇಳಿದರು.

ಭಾರತದಲ್ಲಿರುವ ಜಪಾನ್ ರಾಯಭಾರ ಕಚೇರಿಯ ಆರ್ಥಿಕ ಸಚಿವ (ಆರ್ಥಿಕ ಮತ್ತು ಅಭಿವೃದ್ಧಿ) ಹೊಕುಗೋ ಕ್ಯೋಕು ಅವರು ‘ಎಲ್ಲರಿಗೂ ನಮಸ್ಕಾರ’ ಎನ್ನುತ್ತಾ ಕನ್ನಡದಲ್ಲೇ ಮಾತು ಆರಂಭಿಸಿ, ‘ಬೆಂಗಳೂರು ಜಲಮಂಡಳಿ ಅನೇಕ ಸವಾಲುಗಳ ಮಧ್ಯೆಯೂ ನಿಗದಿಪಡಿಸಿದ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುತ್ತಿದೆ’ ಎಂದು ಶ್ಲಾಘಿಸಿದರು.

ಕಾವೇರಿ 6ನೇ ಹಂತದ ಯೋಜನೆಯೂ ಸೇರಿದಂತೆ ಜಲಮಂಡಳಿಯ ಎಲ್ಲ್ಲಾ ಯೋಜನೆಗಳಿಗೆ ಅಗತ್ಯ ಹಣಕಾಸಿನ ನೆರವನ್ನು ನೀಡುವುದಾಗಿ ಭರವಸೆ ನೀಡಿದರು. ಜೈಕಾ ಇಂಡಿಯಾ ಕಚೇರಿಯ ಮುಖ್ಯ ಪ್ರತಿನಿಧಿ ಟೇಕುಚಿ ಟಕುರೋ, ಭಾರತದಲ್ಲಿ ಜಪಾನ್‌ನ ಕಾನ್ಸಲ್‌ ಜನರಲ್‌ ಟ್ಸುಟೋಮು ಅವರು ಮಾತನಾಡಿದರು.

ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಪ್ರಾಸ್ತಾವಿಕ ಮಾತನಾಡಿದರು. ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ  ಚಲುವರಾಯಸ್ವಾಮಿ, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್‌, ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌, ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರಗಳು

ಈಡುಗಾಯಿ ಪ್ರಹಸನ

ಕಾರ್ಯಕ್ರಮಕ್ಕೂ ಮುನ್ನ ವೇದಿಕೆಯ ಎದುರು ಈಡುಗಾಯಿ ಒಡೆಯಲು ಡಿಸಿಎಂ ಡಿ.ಕೆ.ಶಿವಕುಮಾರ್ ಸಿದ್ದರಾದರು. ಸಿಎಂ ಆದಿಯಾಗಿ ವೇದಿಕೆಯಲ್ಲಿದ್ದವರೆಲ್ಲ ಅವರಿಗೆ ಸಾಥ್ ನೀಡಿದರು. ಸಭಾಂಗಣದಲ್ಲಿದ್ದವರೆಲ್ಲ ‘ಹೋ’ ಎನ್ನುತ್ತಾ ಎದ್ದು ನಿಂತರು. ಶಿವಕುಮಾರ್ ಒಮ್ಮೆ ಕಾಯಿಯನ್ನು ಕಲ್ಲಿಗೆ ಒಡೆದರು. ಕಾಯಿ ಒಡೆಯಲಿಲ್ಲ. ಎರಡನೇ ಬಾರಿಗೂ ಆಗಲಿಲ್ಲ. ಮೂರನೇ ಪ್ರಯತ್ನದಲ್ಲಿ ಈಡುಗಾಯಿ ಚೂರಾಯಿತು.. ಸಭೆಯಲ್ಲಿದ್ದರೆಲ್ಲ ‘ಓಹ್...’ ಎಂದು ಕೂಗಿದರು !

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.