ADVERTISEMENT

ಚಿತ್ರಕಲಾ ಪರಿಷತ್ತಿನಲ್ಲಿ ಜನಾರ್ದನ ರಾವ್ ಹಾವಂಜೆ ಅವರ ಕಾವಿ ಕಲೆ ಪ್ರದರ್ಶನ

ಗಾಣಧಾಳು ಶ್ರೀಕಂಠ
Published 8 ನವೆಂಬರ್ 2024, 9:35 IST
Last Updated 8 ನವೆಂಬರ್ 2024, 9:35 IST
   

ಬೆಂಗಳೂರು: ಇಲ್ಲಿನ ಚಿತ್ರಕಲಾ ಪರಿಷತ್‌ನಲ್ಲಿ ನ.9 ರಿಂದ 17ರವರೆಗೆ ಕಾವಿ ಕಲೆಯ ಚಿತ್ರ ಪ್ರದರ್ಶನ ನಡೆಯಲಿದೆ. ಜನಾರ್ದನ ರಾವ್ ಹಾವಂಜೆ ಅವರ ಚಿತ್ರಗಳು ಪ್ರದರ್ಶನದಲ್ಲಿ ಇರಲಿವೆ.

'ಕಾವಿ ಕೆಲಡೋಸ್ಕೋಪ್' ಎಂಬ ಶೀರ್ಷಿಕೆಯಡಿ ಈ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯಲಿದೆ.

ಬಿಳಿ ಬಣ್ಣದ ಕ್ಯಾನ್ವಾಸ್ ಮೇಲೆ ಕೆಮ್ಮಣ್ಣಿನ ಬಣ್ಣದಲ್ಲಿ ಅರಳಿದ ಚಿತ್ತಾರಗಳ ಸೊಬಗು. ಗೀಚಿದ ಚಿತ್ರಗಳಂತೆ ಕಾಣುವ ಈ ವಿಶಿಷ್ಟ ಚಿತ್ರಕಲೆಯನ್ನು ‘ಕಾವಿ ಕಲೆ’ ಎನ್ನಲಾಗುತ್ತದೆ.

ADVERTISEMENT

ಕಾವಿ ಕಲೆ ಕರ್ನಾಟಕದ ಕರಾವಳಿ ಭಾಗದ ವಿಶಿಷ್ಟ ಚಿತ್ರ ಕಲಾ ಪ್ರಕಾರ. 13–14ನೇ ಶತಮಾನದ ಪಾರಂಪರಿಕ ಕಲೆಯಾಗಿರುವ ‘ಕಾವಿ ಚಿತ್ರಕಲೆ’ 1950ರ ನಂತರ ಅಳಿವಿನಂಚು ತಲುಪಿದೆ.

ಅಳಿವಿನಂಚಿನಲ್ಲಿರುವ ಈ ಅಪರೂಪದ ಕಲೆಯನ್ನು ಉಳಿಸಲು 22 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ ಉಡುಪಿಯ ಚಿತ್ರ ಕಲಾವಿದ ಜನಾರ್ದನ ರಾವ್ ಹಾವಂಜೆ.

ಮಣಿಪಾಲ ವಿವಿಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್‌ ಮತ್ತು ಸೈನ್ಸ ವಿಭಾಗ ಹಾಗೂ ಮಂಗಳೂರಿನ ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿರುವ ಜನಾರ್ದನ ಅವರು, 800ಕ್ಕೂ ಹೆಚ್ಚು ಕಾವಿ ಚಿತ್ರಗಳಿರುವ ನೆಲೆಗಳನ್ನು ದಾಖಲಿಸಿದ್ದಾರೆ. ಮಾತ್ರವಲ್ಲ, ಈ ಕಲೆಯ ಕುರಿತು ಹಲವು ಸಂಶೋಧನಾ ಪ್ರಬಂಧಗಳನ್ನೂ ಮಂಡಿಸಿದ್ದಾರೆ.

ಅಪರೂಪದ ಕಾವಿ ಚಿತ್ರಕಲೆಯನ್ನು ನಾಡಿನಾದ್ಯಂತ ಪರಿಚಯಿಸಲು ಜನಾರ್ದನ ಅವರು ಮುಂದಾಗಿದ್ದಾರೆ. ಈ ಪ್ರಯತ್ನದ ಭಾಗವಾಗಿ ನಗರದ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಕಾವಿ ಆರ್ಟ್ ಫೌಂಡೇಷನ್ ಮತ್ತು ಹಾಗೂ ಭಾಸಾ ಗ್ಯಾಲರಿ ಮತ್ತು ಸ್ಟುಡಿಯೊ ಸಹಯೋಗದಲ್ಲಿ ಪ್ರದರ್ಶನ ನಡೆಯಲಿದೆ.

'ನೂರಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನ ಕಾಣಲಿವೆ. ಸಾಂಪ್ರದಾಯಿಕ, ಜನಪದೀಯ ಶೈಲಿಯ ಜೊತೆಗೆ ಸಮಕಾಲೀನ ವಿಷಯಗಳ ಕುರಿತ ಚಿತ್ರಗಳಿರಲಿವೆ' ಎಂದು ಜನಾರ್ದನ ತಿಳಿಸಿದ್ದಾರೆ.

ಇದು ಕಾವಿ ಕಲೆಯನ್ನು ಸಮಕಾಲೀನ ಮಾಧ್ಯಮಗಳಲ್ಲಿ ಬಳಸುವ ಹಾಗೂ ಅದರ ಸಾಧ್ಯತೆಗಳನ್ನು ಎತ್ತಿ ಹಿಡಿಯುವ ಪ್ರಯೋಗಾತ್ಮಕ ಪ್ರದರ್ಶನವಾಗಿದೆ.

ಶನಿವಾರ ಮಧ್ಯಾಹ್ನ 3 ಗಂಟೆಗೆ ಕಾವಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಾಗಲಿದೆ. ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಉದ್ಘಾಟಿಸಲಿದ್ದಾರೆ. ಕಲಾವಿದ ಗುರುದಾಸ್ ಶಣೈ, ಕಲಾ ಪ್ರೇಮಿ ರೂಪಾ ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕಾವಿ ಚಿತ್ರಕಲಾ ಪ್ರದರ್ಶನ: ನ.9 ರಿಂದ 17 ರವರೆಗೆ

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ

ಉದ್ಘಾಟನೆ: ಶನಿವಾರ, ಮಧ್ಯಾಹ್ನ 3 ಗಂಟೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.