ಬೆಂಗಳೂರು: ‘ಕ್ರಿಕೆಟಿಗ ಕೆ.ಸಿ. ಕಾರಿಯಪ್ಪ ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ’ ಎಂದು ಆರೋಪಿಸಿ 25 ವರ್ಷದ ಮಹಿಳೆ ಆರ್.ಟಿ.ನಗರ ಠಾಣೆಗೆ ದೂರು ನೀಡಿದ್ದಾರೆ. ಇದೇ ವಿಚಾರವಾಗಿ ಬಾಗಲಗುಂಟೆ ಠಾಣೆಗೆ ಪ್ರತ್ಯೇಕ ದೂರು ನೀಡಿರುವ ಕಾರಿಯಪ್ಪ, ‘ಆನ್‌ಲೈನ್ ಮೂಲಕ ಚಾಕು ತರಿಸಿಟ್ಟುಕೊಂಡಿರುವ ಮಹಿಳೆ, ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಒಂದೂವರೆ ವರ್ಷಗಳ ಹಿಂದೆ ಪರಿಚಯವಾಗಿದ್ದ ಕಾರಿಯಪ್ಪ ಹಾಗೂ ಮಹಿಳೆ, ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಇಬ್ಬರೂ ಪ್ರತ್ಯೇಕ ದೂರು ನೀಡಿದ್ದಾರೆ. ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಇನ್‌ಸ್ಟಾಗ್ರಾಂ ಮೂಲಕ ಪರಿಚಯ: ‘2018ರಲ್ಲಿ ಮೊದಲ ಮದುವೆಯಾಗಿತ್ತು. ಕೆಲ ಕಾರಣಗಳಿಂದ 2020ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದೆ. ಒಂದೂವರೆ ವರ್ಷದ ಹಿಂದೆಯಷ್ಟೇ ಇನ್‌ಸ್ಟಾಗ್ರಾಂ ಮೂಲಕ ಕಾರಿಯಪ್ಪ ಪರಿಚಯವಾಗಿತ್ತು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
‘ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದ ಕಾರಿಯಪ್ಪ, ಗರ್ಭಿಣಿ ಮಾಡಿದ್ದರು. ನಂತರ, ಒತ್ತಾಯದಿಂದ ಗರ್ಭಪಾತ ಮಾಡಿಸಿದ್ದರು. ಈ ಬಗ್ಗೆ ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದೆ. ಮದುವೆಯಾಗುವುದಾಗಿ ಹೇಳಿದ್ದರಿಂದ ದೂರು ವಾಪಸು ಪಡೆದುಕೊಂಡಿದ್ದೆ. ನಂತರ, ಕಾರಿಯಪ್ಪ ನನ್ನಿಂದ ಹಂತ ಹಂತವಾಗಿ ₹2 ಲಕ್ಷ ಪಡೆದಿದ್ದರು. ಇದುವರೆಗೂ ಕಾರಿಯಪ್ಪ ಮದುವೆಯಾಗಿಲ್ಲ. ಅವರ ತಂದೆ–ತಾಯಿಗೆ ನಾನು ಇಷ್ಟವಿಲ್ಲವೆಂದು ಹೇಳಿ ಹಲ್ಲೆ ಮಾಡಿದ್ದಾರೆ’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದ್ಯವ್ಯಸನಿ ಮಹಿಳೆ: ‘ಒಂದೂವರೆ ವರ್ಷದ ಹಿಂದೆ ಮಹಿಳೆ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಇಬ್ಬರು ಪ್ರೀತಿಸುತ್ತಿದ್ದೆವು. ಹಲವೆಡೆ ಸುತ್ತಾಡಿದ್ದೆವು. ಆದರೆ, ಮಹಿಳೆಯ ನಡತೆ ಸರಿ ಇರಲಿಲ್ಲ. ಅವರು ಮದ್ಯವ್ಯಸನಿ ಆಗಿದ್ದರು. ಮಹಿಳೆಗೆ ಹಲವು ಬಾರಿ ಬುದ್ದಿ ಹೇಳಿದರೂ ಕೇಳಿರಲಿಲ್ಲ. ಹೀಗಾಗಿ, ಪ್ರೀತಿ ಮುಂದುವರಿಸುವುದಿಲ್ಲವೆಂದು ಹೇಳಿ ದೂರವಾಗಿದ್ದೆ’ ಎಂದು ಕಾರಿಯಪ್ಪ ದೂರಿನಲ್ಲಿ ತಿಳಿಸಿದ್ದಾರೆ.
‘ಮದುವೆಯಾಗುವಂತೆ ಪೀಡಿಸಲಾರಂಭಿಸಿದ್ದ ಮಹಿಳೆ, ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ನನ್ನ ಕ್ರಿಕೆಟ್ ಜೀವನ ಹಾಳು ಮಾಡಲು ಈಗ ಪುನಃ ಪೊಲೀಸರಿಗೆ ದೂರು ನೀಡಿದ್ದಾರೆ. ನನಗೆ ಹಾಗೂ ನನ್ನ ತಂದೆ–ತಾಯಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ. ಜೊತೆಗೆ, ಮಹಿಳೆಯ ಕೆಲ ವಿಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.