ಬೆಂಗಳೂರು: ‘ಬಿಬಿಎಂಪಿ ಆಡಳಿತದ ಹೊಣೆ ಹೊತ್ತವರೇ, 500ಕ್ಕೂ ಹೆಚ್ಚು ಜನರಿಗೆ ಕೆಂಪೇಗೌಡ ಪ್ರಶಸ್ತಿ ನೀಡುತ್ತಿದ್ದರೋ,ಕಡ್ಲೆಪುರಿ ಹಂಚುತ್ತಿದ್ದರೋ ಗೊತ್ತಾಗಲಿಲ್ಲ’ ಎಂದುರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಕೇಳಿದರು.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕಳೆದ ಭಾನುವಾರ ನಡೆದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಅಸ್ತವ್ಯಸ್ತವಾಗಿತ್ತು. ಕೆಂಪೇಗೌಡರ ಹೆಸರಿಗೆ ಧಕ್ಕೆ ಉಂಟಾಗುವಂತೆ ಮಾಡಿದಬಿಬಿಎಂಪಿ ನಡೆ ಸಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಂಪೇಗೌಡರ ಹೆಸರನ್ನು ಮಾರಾಟಕ್ಕೆ ಇಟ್ಟಂತಾಗಿತ್ತು. ಅಲ್ಲಿನಅಸ್ತವ್ಯಸ್ತ ಸನ್ನಿವೇಶ ಕಂಡು ಪ್ರಶಸ್ತಿ ತಿರಸ್ಕರಿಸಿದ್ದೇನೆ. ಪ್ರಶಸ್ತಿ ಪಡೆದವರಅಂತಿಮ ಪಟ್ಟಿ ಬಿಬಿಎಂಪಿಯ ಯಾವ ಅಧಿಕಾರಿಗಳ ಬಳಿಯೂ ಇಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.
‘ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ರಚಿಸಿ, ಆಯ್ಕೆಯಾದವರ ಪಟ್ಟಿಯನ್ನು ಮುಂಚಿತವಾಗಿ ಪ್ರಕಟಿಸಬೇಕು. ಅಕಳಂಕಿತರಿಗೆ, ರಾಜಕೀಯ ಹಿನ್ನೆಲೆ ಇರದ ಸಾಧಕರಿಗೆ ಪ್ರಶಸ್ತಿ ನೀಡಬೇಕು’ ಎಂದು ಆಗ್ರಹಿಸಿದರು.
ನವಭಾರತ ಅಧ್ಯಕ್ಷ ಅನಿಲ್ ಶೆಟ್ಟಿ, ‘ಪ್ರಶಸ್ತಿ ನೀಡಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ. ಅವರಿವರ ವಸೂಲಿ ಮೇರೆಗೆ, ಹಿಂಬಾಲಕರ ಓಲೈಕೆಗಾಗಿ ಪ್ರಶಸ್ತಿ ನೀಡಲಾಗಿದೆ. ಬಿಬಿಎಂಪಿ ಆಡಳಿತ ಪಕ್ಷದ ಮುಖಂಡ ಎಂ.ಶಿವರಾಜ್ 23, ಶಾಸಕರಾದ ರಾಮಲಿಂಗಾ ರೆಡ್ಡಿ 13, ಆರ್.ಅಶೋಕ 3 ಜನರಿಗೆ ಪ್ರಶಸ್ತಿ ನೀಡಲು ಶಿಫಾರಸು ಮಾಡಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಂಜುನಾಥ್ ರೆಡ್ಡಿ ಅವರ ಹಿಂಬಾಲಕರು ಸೇರಿದಂತೆ ಅನೇಕ ಅನರ್ಹರಿಗೆ ಬೇಕಾಬಿಟ್ಟೆಯಾಗಿ ಪ್ರಶಸ್ತಿ ನೀಡಲಾಗಿದೆ’ ಎಂದು ಆರೋಪಿಸಿದರು.
‘ಯಾರಿಗೆಪ್ರಶಸ್ತಿ ಸಿಕ್ಕಿಲ್ಲವೋ ಅವರಿಗೆ ಪ್ರಶಸ್ತಿ ಪತ್ರ ಮುದ್ರಣ ಮಾಡಿ ತಲುಪಿಸುವುದಾಗಿಯೂ ಅಧಿಕಾರಿಗಳು ಹೇಳಿದ್ದಾರಂತೆ. ಪಾಲಿಕೆ ಇಂತಹ ನಡೆ ಖಂಡನೀಯ. ಒಂದು ವಾರದೊಳಗೆ ಪ್ರಶಸ್ತಿಯನ್ನು ಅಸಿಂಧುಗೊಳಿಸಬೇಕು. ಇಲ್ಲದಿದ್ದರೆ, ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ನನಗೆ ಕೆಂಪೇಗೌಡ ಪ್ರಶಸ್ತಿ ಬಂದಿರುವ ಸುದ್ದಿ ತಿಳಿದು ತುಂಬಾ ಖುಷಿಯಾಗಿತ್ತು. ಆದರೆ ಸಮಾರಂಭದ ದಿನದಂದು ಪ್ರಶಸ್ತಿ ನೀಡದೆ ಪಾಲಿಕೆ ಅವಮಾನಿಸಿದೆ. ಇನ್ನೂ ಮುಂದಾದರೂ ಶಿಸ್ತಿನ ಕ್ರಮ ಕೈಗೊಳ್ಳಲಿ, ಇಂತಹ ಅವಮಾನ ನಿಲ್ಲಲಿ’ ಎಂದು ಪ್ರಶಸ್ತಿ ವಂಚಿತೆ ಲೇಖಕಿ ಹಂಸಾ ಬೇಸರ ವ್ಯಕ್ತಪಡಿಸಿದರು.
**
‘ಇಬ್ಬರಿಗಾಗಿ ಮಾತ್ರ ಶಿಫಾರಸ್ಸು ಮಾಡಿದ್ದೇನೆ’
‘ಕೆಂಪೇಗೌಡ ಪ್ರಶಸ್ತಿ ನೀಡಲು ಇಬ್ಬರಿಗಷ್ಟೇ ಶಿಫಾರಸ್ಸು ಮಾಡಿದ್ದೇನೆ’ ಎಂದು ಬಿಬಿಎಂಪಿಯ ಆಡಳಿತ ಪಕ್ಷದ ಮುಖಂಡ ಎಂ.ಶಿವರಾಜ್ ಸ್ಪಷ್ಟಪಡಿಸಿದರು.
‘ರಂಗ ಕಲಾವಿದೆ ವಸುಂಧರಾ ಹಾಗೂ ಕಲಾವಿದ ಚಿಕ್ಕಣ್ಣ ಅವರಿಗೆ ಮಾತ್ರ ಪ್ರಶಸ್ತಿ ನೀಡುವಂತೆ ಶಿಫಾರಸ್ಸು ಮಾಡಿದ್ದೇನೆ. 23 ಜನರಿಗೆ ಶಿಫಾರಸ್ಸು ಮಾಡಿರುವುದಾಗಿ ನನ್ನ ವಿರುದ್ಧ ಕೇಳಿ ಬಂದಿರುವ ಆರೋಪ ಶುದ್ಧ ಸುಳ್ಳು. ಆರೋಪಿಸುವವರು ದಾಖಲೆ ಇಟ್ಟುಕೊಂಡು ಮಾತನಾಡಲಿ’ ಎಂದರು.
**
ಪ್ರಶಸ್ತಿ ಘೋಷಿಸಿ, ಕೆಲವರಿಗೆ ನೀಡದೆ ಇದ್ದುದರಿಂದ ಅವಮಾನ ಆಗಿದೆ. ಇನ್ನೂ ಮುಂದಾದರೂ ಮಾನದಂಡಗಳನ್ನು ಇಟ್ಟುಕೊಂಡು ಪ್ರಶಸ್ತಿ ನೀಡುವಲ್ಲಿ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು.
– ಡಾ.ಕೆ.ಷರೀಫಾ, ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.