ADVERTISEMENT

ಬೆಂಗಳೂರು: ನಾಡ ಕಟ್ಟಿದ ಕೆಂಪೇಗೌಡರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 0:00 IST
Last Updated 28 ಜೂನ್ 2023, 0:00 IST
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಪುಷ್ಪ ನಮನ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಪುಷ್ಪ ನಮನ ಸಲ್ಲಿಸಿದರು.   

ಬೆಂಗಳೂರು: ನಗರದಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡ ಅವರ 514ನೇ ಜಯಂತಿ ಅದ್ದೂರಿಯಿಂದ ನಡೆಯಿತು.

ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ಕೆಂಪೇಗೌಡರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ, ಕೆಂಪೇಗೌಡರ ದೂರದೃಷ್ಟಿಯನ್ನು ಕೊಂಡಾಡಿದರು. ಅಲ್ಲಲ್ಲಿ ಮೆರವಣಿಗಳು ನಡೆದವು. ಕೆಂಪೇಗೌಡ ಕೊಡುಗೆಯನ್ನು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಹೇಶ ಜೋಶಿ ಮಾತನಾಡಿ, 15ನೇ ಶತಮಾನ ಭಾರತದಲ್ಲಿ ಸುವರ್ಣ ಯುಗ ಎಂದು ಕರೆಸಿಕೊಂಡಿದೆ. ಆ ಕಾಲ ಘಟ್ಟದಲ್ಲಿ ಇದ್ದ ರಾಜಮನೆತನಗಳಲ್ಲಿ ವಿಜಯನಗರದ ವೈಭವವನ್ನು ಕಂಡು ಬೆರಗಾಗಿ ಅಂತಹದೇ ಸಾಮ್ರಾಜ್ಯವನ್ನು ಬೆಂಗಳೂರಿನಲ್ಲಿ ಕಟ್ಟ ಬೇಕು ಎನ್ನುವ ಕನಸು ಕಂಡವರು ನಾಡಪ್ರಭು ಕೆಂಪೇಗೌಡರು ಎಂದು ಬಣ್ಣಿಸಿದರು.

ADVERTISEMENT

ಕೆಂಪೇಗೌಡರು ಸುಖ, ಶಾಂತಿ, ಸಮೃದ್ಧಿಯ ಆಧಾರದ ಮೇಲೆ ಸಾಮಾಜ್ಯವನ್ನು ಕಟ್ಟಿದರು. ನಾಡಿಗೆ ನೀರಿನ ವ್ಯವಸ್ಥೆ ಅತೀ ಮುಖ್ಯ ಎಂದು ಗುರುತಿಸಿ ಇನ್ನೂರಕ್ಕೂ ಹೆಚ್ಚು ಕೆರೆಗಳನ್ನು ಕಟ್ಟಿಸಿದ್ದರು ಎಂದರು.

ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಡಾ.ಬಿ.ಎಂ.ಪಟೇಲ್ ಪಾಂಡು ಇದ್ದರು.

ಯುವಜನಾಂಗಕ್ಕೆ ಕೆಂಪೇಗೌಡರು ಮಾದರಿ: ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಂ.ಇ.ಎಸ್. ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಇತಿಹಾಸಕಾರ ಪ್ರೊ.ಮುನಿರಾಜಪ್ಪ ಮಾತನಾಡಿ, ಯುವಜನಾಂಗದಲ್ಲಿ ನಾಯಕತ್ವವನ್ನು ಬೆಳೆಸಬೇಕಾದರೆ ಕೆಂಪೇಗೌಡರಂತಹ ಇತಿಹಾಸ ಪುರುಷರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಬೆಳೆಸಬೇಕು ಎಂದರು. ಎಂ.ಪ್ರಕಾಶಮೂರ್ತಿ, ಡಾ.ಎಚ್.ಎಸ್.ಗಣೇಶ ಭಟ್, ಪ್ರೊ.ಯಶಸ್ವಿನಿ ಶರ್ಮ ಇದ್ದರು.

ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಂ.ಇ.ಎಸ್. ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ವತಿಯಿಂದ ನಡೆದ ಕಾರ್ಯಕ್ರಮವನ್ನು ಇತಿಹಾಸಕಾರ ಪ್ರೊ.ಮುನಿರಾಜಪ್ಪ ಉದ್ಘಾಟಿಸಿದರು.

ಡಿಕೆಶಿ ಅಶ್ವತ್ಥ್‌ ನಾರಾಯಣ ಪರಸ್ಪರ ವಾಕ್ಸಮರ

ಬೆಂಗಳೂರು: ಸದಾಶಿವನಗರದ ರಮಣಮಹರ್ಷಿ ಉದ್ಯಾನದಲ್ಲಿ ಮಂಗಳವಾರ ನಡೆದ ಕೆಂಪೇಗೌಡ ಜಯಂತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಅಶ್ವತ್ಥ್‌ ನಾರಾಯಣ ಅವರು ಪರಸ್ಪರ ವಾಕ್ಸಮರ ನಡೆಸಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ ‘ನನಗೂ ಬೆಂಗಳೂರಿಗೂ ಇರುವ ಸಂಬಂಧದ ಇತಿಹಾಸದ ಬಗ್ಗೆ ಶಾಸಕ ಅಶ್ವತ್ ನಾರಾಯಣ ಅವರಿಗೆ ಗೊತ್ತಿಲ್ಲ. ಅದಕ್ಕೆ ಅವರು ಮಾತನಾಡುತ್ತಾರೆ. ಅದನ್ನು ಅವರು ತಿಳಿದುಕೊಳ್ಳಲಿ’ ಎಂದು ಹೇಳಿದರು. 

ಕೆಂ‍ಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ನಾನು 6ನೇ ವಯಸ್ಸಿಗೆ ಶಿಕ್ಷಣ ಪಡೆಯಲು ನಮ್ಮೂರಿನಿಂದ ಬೆಂಗಳೂರಿಗೆ ಬಂದಿದ್ದೆ. ಇಲ್ಲಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೇರಿ ನನ್ನ ವಿದ್ಯಾಭ್ಯಾಸ ಆರಂಭಿಸಿದೆ’ ಎಂದರು.

‘ಬೆಂಗಳೂರು ನಗರ ಗ್ರಾಮಾಂತರ ಜಿಲ್ಲೆ ಕೆಂಪೇಗೌಡರು ಕಟ್ಟಿದ ಪ್ರದೇಶ. ತಮಿಳುನಾಡಿನ ಗಡಿ ಭಾಗದಲ್ಲಿ ಸಂಗಮದ ಬಳಿ ಕೆಂಪೇಗೌಡರ ಕೋಟೆಯಿದೆ. ಅದರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆ ಕೋಟೆ ಸಮೀಪ ನಿಜಲಿಂಗಪ್ಪ ಅವರ ಮನೆ ಪಕ್ಕ ವೀರೇಂದ್ರ ಪಾಟೀಲ್ ಅವರ ಮನೆಯಿದ್ದು ಅದರ ಪಕ್ಕದಲ್ಲಿ ನನ್ನ ತಂದೆ ದೊಡ್ಡಹಾಲಹಳ್ಳಿ ಕೆಂಪೇಗೌಡರ ಮನೆ ಇದೆ. ಇತ್ತೀಚೆಗೆ ಅದನ್ನು ಮಾರಿದ್ದೇನೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶ್ವಥ್ ನಾರಾಯಣ್ ಅವರು ‘ನನಗೂ ರಾಮನಗರಕ್ಕೂ ಏನು ಸಂಬಂಧ ಎಂದು ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ. ಹಿಂದೆ ಯಾವುದೇ ಸರ್ಕಾರವು ಕೊಡದಷ್ಟು ಯೋಜನೆಗಳನ್ನು ನಾವು ರಾಮನಗರಕ್ಕೆ ಕೊಟ್ಟಿದ್ದೇವೆ. ಜಿಲ್ಲೆಯನ್ನೇ ಅಭಿವೃದ್ಧಿ ಮಾಡಿದ್ದೇವೆ’ ಎಂದರು. ‘ರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸ ತಿಳಿಯಲಿದೆ. ನನ್ನ ಕೊಡುಗೆ ಏನು ಎಂದು ಕೆಲಸವೇ ಮಾತನಾಡುತ್ತದೆ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.