ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿ ಪಡಿಸುತ್ತಿರುವ ಕೆಂಪೇಗೌಡ ಬಡಾವಣೆಗೆ ಗುರುವಾರ ವಿಧಾನಸಭೆಯ ಅರ್ಜಿಗಳ ಸಮಿತಿ ಭೇಟಿ ನೀಡಿ ಪರಿಶೀಲಿಸಿತು.
ಇದೇ ವೇಳೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮಾಧ್ಯಮಗಳೊಂದಿಗೆ ಮಾತನಾಡಿ, ‘ಕೋವಿಡ್ ಹಾಗೂ ತಾಂತ್ರಿಕ ಸಮಸ್ಯೆಯಿಂದ ಬಡಾವಣೆಯ ಕಾಮಗಾರಿ ಮೂರು ವರ್ಷಗಳಿಂದ ಕುಂಠಿತಗೊಂಡಿವೆ. ಪರಿಸ್ಥಿತಿ ಈಗ ಸುಧಾರಣೆಯಾಗಿದ್ದು, ಕಾಮಗಾರಿಗೆ ವೇಗ ನೀಡಲಾಗಿದೆ. ನಿವೇಶನದಾರರು ಮನೆ ನಿರ್ಮಿಸಲು ಬಂದರೆ ತಕ್ಷಣವೇ ನೀರು, ವಿದ್ಯುತ್ ಮತ್ತು ರಸ್ತೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ವಿಶ್ವನಾಥ್ ತಿಳಿಸಿದರು.
ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ₹ 59 ಕೋಟಿ ಬಿಡುಗಡೆ ಮಾಡಲಾಗುವುದು. ಮುಂದೆ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ ಎಂದರು.
ಕನ್ನಳ್ಳಿಕೆರೆಯ ಸಮೀಪದ ನಿವೇಶನಗಳಲ್ಲಿ ತೇವಾಂಶ ಸಮಸ್ಯೆಯಿದೆ. ತಜ್ಞರು ಪರಿಶೀಲನೆ ನಡೆಸಲಿದ್ದಾರೆ. ₹ 12 ಕೋಟಿ ಅನುದಾನದಲ್ಲಿ 12 ಮೀಟರ್ ಆಳದಿಂದ ತಡಗೋಡೆ ನಿರ್ಮಿಸಲು ಮುಂದಾಗಿದ್ದು, ತೇವಾಂಶ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಬಿಡಿಎ ಆಯುಕ್ತ ರಾಜೇಶ್‌ಗೌಡ ತಿಳಿಸಿದರು.
ಸಮಿತಿ ಅಧ್ಯಕ್ಷ ವಿಶ್ವನಾಥ್ ಚಂದ್ರಶೇಖರ ಮಾಮನಿ ನೇತೃತ್ವದಲ್ಲಿ ಸದಸ್ಯರಾದ ಎಸ್.ಸುರೇಶ್ ಕುಮಾರ್, ಎಂ.ಪಿ.ಅಪ್ಪಚ್ಚು ರಂಜನ್, ರಮೇಶ್ ಭೂಸನೂರು, ಅಮೃತ ಅಯ್ಯಪ್ಪ ದೇಸಾಯಿ, ಉಮಾನಾಥ್ ಕೋಟ್ಯಾನ್, ವೀರಭದ್ರಯ್ಯ ಕೆಂಪೇಗೌಡ ಬಡಾವಣೆಯ ಕೊಡಿಗೇಹಳ್ಳಿ, ಕನ್ನಳ್ಳಿ, ಅರ್ಚಕರ ಬಡಾವಣೆ, ಕಡಬಗೆರೆ ಭೇಟಿ ನೀಡಿ ಪರಿಶೀಲಿಸಿತು.
ಇದೇ ವೇಳೆ ನಿವೇಶನದಾರರಿಂದ ಸಮಿತಿಯು ಅಹವಾಲು ಸ್ವೀಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.