ADVERTISEMENT

ಮೂಲಸೌಕರ್ಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಎಸ್.ಆರ್.ವಿಶ್ವನಾಥ್

ನಾಡಪ್ರಭು ಕೆಂಪೇಗೌಡ ಬಡಾವಣೆ: ಅಧಿಕಾರಿಗಳಿಗೆ ಬಿಡಿಎ ಅಧ್ಯಕ್ಷ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:38 IST
Last Updated 28 ಡಿಸೆಂಬರ್ 2020, 19:38 IST
ಎಸ್.ಆರ್.ವಿಶ್ವನಾಥ್
ಎಸ್.ಆರ್.ವಿಶ್ವನಾಥ್    

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ತ್ವರಿತಾಗಿ ಪೂರ್ಣಗೊಳಿಸಬೇಕು. ಈ ಬಡಾವಣೆಯನ್ನು ಮಾದರಿಯಾಗಿ ರೂಪಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಡಿಎ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಅವರು, ಈ ಬಡಾವಣೆಯಲ್ಲಿ ಇದುವರೆಗೆ ಎಷ್ಟು ಮೂಲಸೌಕರ್ಯ ಕಲ್ಪಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದರು.

ಬಡಾವಣೆಗೆ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳು ಶೇ 50ರಷ್ಟು ಪೂರ್ಣಗೊಂಡಿವೆ. ಇನ್ನುಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನದ ಕೊರತೆ ಇದೆ ಎಂದು ಅಧಿಕಾರಿಗಳು ಅಧ್ಯಕ್ಷರ ಗಮನಕ್ಕೆ ತಂದರು.

ADVERTISEMENT

‘ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಷ್ಟು ವೆಚ್ಚ ತಗಲುತ್ತದೆ ಎಂಬ ಬಗ್ಗೆ ವರದಿ ನೀಡಿ. ಅದರ ಆಧಾರದಲ್ಲಿ ಅನುದಾನ ಹೊಂದಿಸಲು ಕ್ರಮ ವಹಿಸಲಾಗುತ್ತದೆ’ ಎಂದು ಅಧ್ಯಕ್ಷರು ಭರವಸೆ ನೀಡಿದರು.

‘ಬಡಾವಣೆಗೆ ಭೂಮಿಯನ್ನು ಬಿಟ್ಟುಕೊಟ್ಟಿರುವ ರೈತರಿಗೆ ಅಭಿವೃದ್ಧಿಪಡಿಸಿದ10,297 ನಿವೇಶನಗಳನ್ನು 40:60 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ. ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳು ನಾನಾ ಕಾರಣಗಳಿಂದ ರದ್ದುಗೊಂಡಿದ್ದ ಹಿನ್ನೆಲೆಯಲ್ಲಿ ನಿವೇಶನಾದಾರರಿಗೆ 1ಸಾವಿರಕ್ಕೂ ಹೆಚ್ಚು ಬದಲಿ ನಿವೇಶನಗಳನ್ನು ನೀಡಲಾಗಿದೆ. ನ್ಯಾಯಾಲಯದಲ್ಲಿ ಜಮೀನು ವ್ಯಾಜ್ಯಗಳಿರುವ ಭೂಮಿಯನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಆದಷ್ಟೂ ಬೇಗ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಭೂಮಿ ಕಳೆದುಕೊಂಡಿರುವ ರೈತರ ಮನವೊಲಿಕೆಗೆ ಪ್ರಯತ್ನಿಸಬೇಕು. ಸಂಪೂರ್ಣ ಅಭಿವೃದ್ಧಿ ಹೊಂದಿದ ನಿವೇಶನಗಳನ್ನೇ ಬಿಡಿಎ ನೀಡಲಿದೆ ಎಂಬ ಭರವಸೆಯನ್ನು ಅವರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಅಧ್ಯಕ್ಷರು ನಿರ್ದೇಶನ ನೀಡಿದರು. ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್ ಮತ್ತು ಕಾರ್ಯದರ್ಶಿ ವಾಸಂತಿ ಅಮರ್ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.

‘ಮಾತುಕತೆ ಮೂಲಕ ವ್ಯಾಜ್ಯ ಇತ್ಯರ್ಥ’
ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳಿಗೆ ಭೂಮಿ ನೀಡಿರುವವರು ಹೆಚ್ಚಿನ ಪರಿಹಾರಕ್ಕೆ ಅಥವಾ ಅಭಿವೃದ್ಧಿಪಡಿಸಿದ ನಿವೇಶನಕ್ಕೆ ಬೇಡಿಕೆ ಸಲ್ಲಿಸಿ ತಗಾದೆ ತೆಗೆದಿದ್ದಾರೆ. ಇಂತಹ 600ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಇಂತಹ ವ್ಯಾಜ್ಯಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕೆಂದು ಕಾನೂನು ವಿಭಾಗದ ಅಧಿಕಾರಿಗಳಿಗೆ ಬಿಡಿಎ ಅಧ್ಯಕ್ಷರು ಸೂಚನೆ ನೀಡಿದರು.

‘ನಗದು ಪರಿಹಾರದ ಬದಲು 40:60 ಅನುಪಾತದಡಿ ಅಭಿವೃದ್ಧಿಪಡಿಸಿದ ನಿವೇಶನಕ್ಕೆ ಬೇಡಿಕೆ ಇಟ್ಟಿರುವ ಮತ್ತು ನಗದು ಪರಿಹಾರದ ಬಗ್ಗೆ ತಕರಾರು ಅರ್ಜಿಗಳನ್ನು ಸಲ್ಲಿಸಿರುವ ರೈತರು ಮತ್ತು ಭೂಮಾಲೀಕರೊಂದಿಗೆ ಖುದ್ದಾಗಿ ಮಾತುಕತೆ ನಡೆಸುತ್ತೇವೆ. ಮಾತುಕತೆಗೆ ಸಿದ್ಧವಾಗಿರುವವರ ಜೊತೆ ಸಭೆ ನಡೆಸಿ ನ್ಯಾಯಾಲಯದಿಂದ ಹೊರಗೇ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಪ್ರಯತ್ನಿಸುತ್ತೇವೆ. ಈ ಕುರಿತು ಶೀಘ್ರವೇ ಸಭೆಯನ್ನು ಆಯೋಜಿಸುತ್ತೇವೆ’ ಎಂದು ತಿಳಿಸಿದರು.

‘ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಭೂಮಾಲಿಕರಿಗೆ ಆದ್ಯತೆ ಮೇರೆಗೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದೂ ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.