ADVERTISEMENT

ಕೆಂಪೇಗೌಡರ ಜಾತ್ಯತೀತ ತತ್ವ ಮಾದರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:03 IST
Last Updated 27 ಜೂನ್ 2024, 16:03 IST
<div class="paragraphs"><p>  ಕೆಂಪೇಗೌಡ ಪ್ರಶಸ್ತಿಯನ್ನು ಗಾಂಧಿಭವನದ ಪರವಾಗಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ಎನ್‌.ಆರ್‌. ವಿಶುಕುಮಾರ್‌, ಅಧ್ಯಕ್ಷ ವೂಡೇ ಪಿ. ಕೃಷ್ಣ, ಬೆಂಗಳೂರು ಸೈನ್ಸ್ ಫೋರಂ ಪರವಾಗಿ ಕಾರ್ಯದರ್ಶಿ ವಿ. ವೆಂಕಟಶಿವ ರೆಡ್ಡಿ, ಅಧ್ಯಕ್ಷ ಎಚ್.ಎನ್. ಸುಬ್ರಹ್ಮಣ್ಯ ಮತ್ತು ಸುಮಂಗಲಿ ಸೇವಾ ಆಶ್ರಮದ ಪರವಾಗಿ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ ಸ್ವೀಕರಿಸಿದರು.&nbsp;</p></div>

ಕೆಂಪೇಗೌಡ ಪ್ರಶಸ್ತಿಯನ್ನು ಗಾಂಧಿಭವನದ ಪರವಾಗಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ಎನ್‌.ಆರ್‌. ವಿಶುಕುಮಾರ್‌, ಅಧ್ಯಕ್ಷ ವೂಡೇ ಪಿ. ಕೃಷ್ಣ, ಬೆಂಗಳೂರು ಸೈನ್ಸ್ ಫೋರಂ ಪರವಾಗಿ ಕಾರ್ಯದರ್ಶಿ ವಿ. ವೆಂಕಟಶಿವ ರೆಡ್ಡಿ, ಅಧ್ಯಕ್ಷ ಎಚ್.ಎನ್. ಸುಬ್ರಹ್ಮಣ್ಯ ಮತ್ತು ಸುಮಂಗಲಿ ಸೇವಾ ಆಶ್ರಮದ ಪರವಾಗಿ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ ಸ್ವೀಕರಿಸಿದರು. 

   

ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌

ಬೆಂಗಳೂರು: ‘ಒಂದು ಜಾತಿಗೆ ಸೀಮಿತವಾಗದೇ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಕೆಂಪೇಗೌಡ ಶ್ರಮಿಸಿದ್ದರು. ಅಂಥ ಜಾತ್ಯತೀತ ತತ್ವದಲ್ಲಿ ಜನರು ಬದುಕುವ ಮೂಲಕ ಕೆಂಪೇಗೌಡರನ್ನು ಸ್ಮರಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ADVERTISEMENT

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನದಿಗಳಿಲ್ಲದ ಬೆಂಗಳೂರಿನ ಸುತ್ತಮುತ್ತ ಕೆರೆಗಳನ್ನು ಕಟ್ಟಿಸಿದರು. ಎಲ್ಲ ವಿಧದ ವ್ಯಾಪಾರಗಳು ನಡೆಯಬೇಕು ಎಂಬ ಕಾರಣಕ್ಕೆ ಪೇಟೆಗಳನ್ನು ನಿರ್ಮಿಸಿದರು. ಅವರ ಆಡಳಿತ ನೋಡಿದರೆ ಜಾತಿ, ಧರ್ಮಕ್ಕೆ ಸೀಮಿತವಾಗದೇ ಸಮಾಜಮುಖಿಯಾಗಿರುವುದು ಗೊತ್ತಾಗುತ್ತದೆ ಎಂದು ವಿವರಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಕೆಂಪೇಗೌಡರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ವಿಶ್ವಮಾನ್ಯ ಬೆಂಗಳೂರನ್ನು ಕಟ್ಟಿದ ಅವರು ಎಲ್ಲ ಜಾತಿ, ಧರ್ಮಕ್ಕೂ ನಾಡಪ್ರಭು’ ಎಂದು ಬಣ್ಣಿಸಿದರು.

ಕೆಂಪೇಗೌಡರ ಬಗ್ಗೆ ಮಕ್ಕಳೂ ತಿಳಿದುಕೊಳ್ಳಬೇಕು ಎಂಬ ಕಾರಣಕ್ಕೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಚರ್ಚಾಸ್ಪರ್ಧೆ ಏರ್ಪಡಿಸಲು ಅನುದಾನ ನೀಡಲಾಗಿದೆ. ಸರ್ಕಾರವು 25ಕ್ಕೂ ಅಧಿಕ ಮಹನೀಯರ ಜಯಂತಿ ಆಚರಿಸುತ್ತಿದೆ. ಅದಕ್ಕೆ ನೀಡುತ್ತಿರುವ ಹಣ ಕಡಿಮೆ ಇದೆ. ಹಣದ ಕೊರತೆ ತಪ್ಪಿಸಲು ಬಿಬಿಎಂಪಿ ವ್ಯಾಪ್ತಿಯ ಪ್ರತಿ ತಾಲ್ಲೂಕಿಗೆ ₹ 1 ಲಕ್ಷ ಅನುದಾನ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಸುಮನಹಳ್ಳಿ ರಸ್ತೆ ಬಳಿಯ 5 ಎಕರೆ ಜಾಗದಲ್ಲಿ ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರದ ಕಚೇರಿಯನ್ನು ಅತ್ಯುತ್ತಮ ಸ್ವರೂಪದಲ್ಲಿ ನಿರ್ಮಾಣ ಮಾಡಲಾಗುವುದು. ಆವತಿಯಲ್ಲಿ 10 ಎಕರೆ ವಿಸ್ತೀರ್ಣದ ಜಾಗದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ಒಡೆಯಬೇಡಿ: 

‘ಬೆಂಗಳೂರು ನಗರವನ್ನು ಭಾಗ ಮಾಡುವ ಪ್ರಯತ್ನ ಹಿಂದೆ ನಡೆದಿತ್ತು. ಹೋರಾಟದ ಮೂಲಕ ಆಗ ತಡೆಯಲಾಗಿತ್ತು. ಈಗ ಮತ್ತೆ ಭಾಗ ಮಾಡುವ ಕೂಗು ಎದ್ದಿದೆ. ಬೆಂಗಳೂರನ್ನು ಭಾಗ ಮಾಡಲು ಯಾರೂ ಮುಂದಾಗಬಾರದು. ನಗರ ಒಂದಾಗಿ ಉಳಿಯಬೇಕು’ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ಆಗ್ರಹಿಸಿದರು. 

ಇಬ್ಬಾಗ ಮಾಡಬೇಕು ಎಂದಿದ್ದರೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಮಾಡಿ. ಆಗ ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತದೆ. ಈಗ ಉತ್ತರ ಕರ್ನಾಟಕದವರು ಬೆಂಗಳೂರು ಸೇರಿರುವುದರಿಂದ ಆ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ತಿಳಿಸಿದರು.

‘ಮುಂದಿನ ಬಾರಿ ಹೆಸರು ಬಿಡಲ್ಲ’ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದ ಆಹ್ವಾನ ಪತ್ರಿಕೆಯಲ್ಲಿ ಕೆಲವರ ಹೆಸರು ಬಿಟ್ಟುಹೋಗಿದೆ. ಇದು ಉದ್ದೇಶಪೂರ್ವಕವಾಗಿ ಆಗಿರುವುದಲ್ಲ. ಅವರ ಹೆಸರನ್ನು ಮುಂದಿನ ಬಾರಿ ಸೇರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದರು. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಶೋಭಾ ಕರಂದ್ಲಾಜೆ ವಿ. ಸೋಮಣ್ಣ ಹೆಸರಿದ್ದರೂ ಎಚ್.ಡಿ. ಕುಮಾರಸ್ವಾಮಿ ಹೆಸರು ಹಾಕಿರಲಿಲ್ಲ. ಅಲ್ಲದೇ ಒಕ್ಕಲಿಗ ಸಮಾಜದ ಹಿರಿಯರಾದ ದೇವೇಗೌಡರ ಹೆಸರೂ ಇಲ್ಲ ಎಂದು ಒಕ್ಕಲಿಗರ ಸಮಾಜದ ಕೆಲವರು ಬುಧವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ಲೋಪ: ‘ಅಧಿಕಾರಿಗಳು ಶಿಷ್ಟಾಚಾರ ಅನುಸರಿಸಿದ್ದಾರೆ. ದೇವೇಗೌಡರು ಹಾಸನ ಜಿಲ್ಲೆ ವ್ಯಾಪ್ತಿಗೆ ಸೇರಿದವರು. ಕುಮಾರಸ್ವಾಮಿ ಮಂಡ್ಯ ಸಂಸದರು. ನಿರ್ಮಲಾ ಸೀತಾರಾಮನ್‌ ಬೆಂಗಳೂರಿನಿಂದ ಆಯ್ಕೆ ಆಗಿರುವುದರಿಂದ ಅವರ ಹೆಸರು ಸೇರಿಸಲಾಗಿದೆ. ನಾವು ಯಾರನ್ನೂ ಅಗೌರವಿಸಿಲ್ಲ. ದೇವೇಗೌಡ–ಕುಮಾರಸ್ವಾಮಿ ಹೆಸರು ಹಾಕಬೇಕಿತ್ತು. ಲೋಪವಾಗಿದೆ ಮುಂದೆ ಸರಿಪಡಿಸುತ್ತೇವೆ’ ಎಂದು ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದರು.

‘ಬಿಜಿನೆಸ್ ಕಾರಿಡಾರ್‌’ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್‌) ಕಾರ್ಯರೂಪಕ್ಕೆ ಬಾರೆದೆ ನಿಂತುಹೋಗಿತ್ತು. ಏಳೆಂಟು ಬಾರಿ ಟೆಂಡರ್‌ ಕರೆದರೂ ಯಾರೂ ಭಾಗವಹಿಸಿರಲಿಲ್ಲ. ಈಗ ಬಿಡಿಎ ಮೂಲಕ ಇದಕ್ಕೆ ಹೊಸ ರೂಪ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು. ‘ಇದನ್ನು ಕ್ಯಾಬಿನೆಟ್ ಮುಂದೆ ಇಟ್ಟು ಬಿಜಿನೆಸ್ ಕಾರಿಡಾರ್ ಎಂದು ಪರಿವರ್ತನೆ ಮಾಡಲಾಗುವುದು. ಸಂಚಾರ ದಟ್ಟಣೆ ನಿವಾರಣೆಗೆ 150 ಕಿ.ಮೀ.ನಷ್ಟು ಮೇಲ್ಸೆತುವೆಗಳನ್ನು ನಿರ್ಮಿಸಿ ಸಿಗ್ನಲ್‌ ಫ್ರೀ ಕಾರಿಡಾರ್‌ ಮಾಡಲಾಗುವುದು. ಸುರಂಗ ಮಾರ್ಗಗಳನ್ನು ನಿರ್ಮಿಸುವ ಯೋಜನೆ ಕೂಡ ಇದೆ’ ಎಂದು ವಿವರಿಸಿದರು.

ಮೂರು ಸಂಸ್ಥೆಗಳಿಗೆ ಕೆಂಪೇಗೌಡ ಪ್ರಶಸ್ತಿ ತಲಾ ₹ 5 ಲಕ್ಷ ಪ್ರಶಸ್ತಿ ಮೊತ್ತವಿರುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಬೆಂಗಳೂರು ಸೈನ್ಸ್‌ ಫೋರಂ ಗಾಂಧಿಭವನ ಮತ್ತು ಸುಮಂಗಲಿ ಸೇವಾಶ್ರಮಗಳಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರು ಸೈನ್ಸ್‌ ಫೋರಂ ಪರವಾಗಿ ಅಧ್ಯಕ್ಷ ಎಚ್‌.ಎನ್‌. ಸುಬ್ರಹ್ಮಣ್ಯ ಕಾರ್ಯದರ್ಶಿ ವೆಂಕಟಶಿವಾರೆಡ್ಡಿ ಗಾಂಧಿಭವನದ ಪರವಾಗಿ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಉಪಾಧ್ಯಕ್ಷ ಎನ್‌.ಆರ್‌. ವಿಶುಕುಮಾರ್‌ ಸುಮಂಗಲಿ ಸೇವಾಶ್ರಮದ ಪರವಾಗಿ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ ಕಾರ್ಯದರ್ಶಿ ಎಂ. ಕಾಂತಮ್ಮ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.