ADVERTISEMENT

ಕೆಂಗೇರಿ ಕರಗ ಶಕ್ತ್ಯೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 19:39 IST
Last Updated 28 ಏಪ್ರಿಲ್ 2024, 19:39 IST
ಕೆಂಗೇರಿಯಲ್ಲಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು
ಕೆಂಗೇರಿಯಲ್ಲಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು   

ಕೆಂಗೇರಿ: ಐತಿಹಾಸಿಕ ಕೆಂಗೇರಿ ಯಲ್ಲಮ್ಮ ದೇವಿಯ 48ನೇ ಕರಗ ಶಕ್ತ್ಯೋತ್ಸವವು ಶನಿವಾರ ತಡರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಸಂಪ್ರದಾಯದಂತೆ ಮಧ್ಯರಾತ್ರಿ 1.35ಕ್ಕೆ ಕರಗವನ್ನು ಹೊತ್ತ ಆನಂದ್ ಅವರು ದೇವಿಯ ಗರ್ಭಗುಡಿಯಿಂದ ಹೊರಬಂದು ದೇವಾಲಯಕ್ಕೆ ಮೂರು ಪ್ರದಕ್ಷಿಣೆ ಸಲ್ಲಿಸಿದರು. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಸಹಸ್ರಾರು ಭಕ್ತರು ಗೋವಿಂದನ ನಾಮಸ್ಮರಣೆ ಮಾಡುತ್ತಾ, ಕರಗಕ್ಕೆ ಪುಷ್ಪಾರ್ಚನೆ ಮಾಡಿದರು.

ಕರಗದ ಪ್ರಯುಕ್ತ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಯಲ್ಲಮ್ಮ ದೇವಸ್ಥಾನವನ್ನು ವಿವಿಧ ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕರಗ ಸಾಗುವ ದಾರಿಯುದ್ದಕ್ಕೂ ವಿದ್ಯುತ್ ದೀಪ, ಹೂಗಳಿಂದ ಅಲಂಕಾರ ಮಾಡಲಾಗಿತ್ತು.

ADVERTISEMENT

ಕೆಂಗೇರಿಯ ರಾಜಬೀದಿಗಳಲ್ಲಿ ಸಾಗಿದ ಕರಗ, ನಂತರ ರಾಮದೇವರು, ಆಂಜನೇಯ ಸ್ವಾಮಿ, ಮುಸ್ಲಿಮರ ದರ್ಗಾ, ಮಾರಮ್ಮ, ಸೋಮೇಶ್ವರ, ಕೋಟೆ , ಅಂಬಾ ಭವಾನಿ, ಕಸ್ತೂರಮ್ಮನ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸ್ವೀಕರಿಸಿ ಭಾನುವಾರ ಬೆಳಿಗ್ಗೆ ದೇವಾಲಯಕ್ಕೆ ತಲುಪಿತು.

ಕರಗ ಮಹೋತ್ಸವದ ಅಂಗವಾಗಿ ಯಕ್ಷಗಾನ, ಮಾತೆಯರಿಂದ ಲಲಿತಾ ಸಹಸ್ರನಾಮ ಪಠಣ, ಕೀಲು ಕುದುರೆ, ಪಟದ ಕುಣಿತ, ವೀರಗಾಸೆ, ಪೂಜಾ ಕುಣಿತ, ಚಂಡೆ ವಾದ್ಯ, ಡೊಳ್ಳು, ನಾದಸ್ವರ, ತಮಟೆ ವಾದ್ಯ ಕಲಾವಿದರ ಪ್ರದರ್ಶನ, ಮಂಗಳವಾದ್ಯ, ವಾದ್ಯ ಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಉತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.