ಕೆಂಗೇರಿ: ‘ಜಾಗತಿಕ ಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ಕೃಷ್ಟ ಕ್ರೀಡಾ ತರಬೇತಿ ದೊರಕಿಸಿಕೊಡುವ ಉದ್ದೇಶದೊಂದಿಗೆ ಬಿಜಿಎಸ್ ಹಾಗೂ ಎಸ್.ಜೆ.ಬಿ ಶಿಕ್ಷಣ ಸಂಸ್ಥೆಯನ್ನು ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
‘ಬಿಜಿಎಸ್ ಮತ್ತು ಎಸ್.ಜೆ.ಬಿ ಸಮೂಹ ಸಂಸ್ಥೆಗಳು ಶಿಕ್ಷಣದೊಂದಿಗೆ ಸಂಗೀತ, ನೃತ್ಯಕಲೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಲೆಗಳಿಗೂ ಪ್ರಾಶಸ್ತ್ಯ ನೀಡುತ್ತಿವೆ. ಕ್ರೀಡಾ ಮನೋಭಾವ ಉದ್ದೀಪನಗೊಳಿಸಿ, ಉತ್ತಮ ಕ್ರೀಡಾ ಪಟುಗಳನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡುವತ್ತ ಗಮನ ಹರಿಸಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಬಿಜಿಎಸ್ ನಾಲೆಜ್ ಸಿಟಿಯಲ್ಲಿ ಸುಮಾರು 80 ಯಾರ್ಡ್ ವಿಸ್ತೀರ್ಣವುಳ್ಳ ಸುಸಜ್ಜಿತ ‘ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣ’ ಸ್ಥಾಪಿಸಲಾಗಿದ್ದು, ರಾಜ್ಯದಲ್ಲೇ ಅತ್ಯುತ್ತಮ ಕ್ರೀಡಾಂಗಣವಾಗಿದೆ. ಕ್ರಿಕೆಟ್‌ನ ಎಲ್ಲ ಮಾದರಿಯ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪಂದ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಬೇಕಾದ ಪೂರಕ ಸೌಕರ್ಯಗಳನ್ನು ಈ ಕ್ರೀಡಾಂಗಣ ಹೊಂದಿದೆ’ ಎಂದು ತಿಳಿಸಿದರು.
‘ಇದೇ ವೇಳೆ ಬಿಜಿಎಸ್ ಇಂಟರ್ ನ್ಯಾಷನಲ್ ಅಕಾಡೆಮಿ ಸ್ಕೂಲ್ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮವೂ ಜರುಗಲಿದೆ. 9ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಪ್ರಕಾಶನಾಥ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಮುಖ್ಯಸ್ಥರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕೆ.ಎಸ್.ಸಿ.ಎ ಕಾರ್ಯದರ್ಶಿ ಸಂತೋಷ್ ಮೆನನ್, ನಟ ಸುದೀಪ್, ಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್, ಮಹಿಳಾ ಕ್ರಿಕೆಟ್ ಪಟು ರಾಜೇಶ್ವರಿ ಗಾಯಕ್‌ವಾಡ್ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.