ಕೆಂಗೇರಿ: ಪರಿಶಿಷ್ಟ ಸಮುದಾಯಕ್ಕೆ ಸೇರಿದ ಭೂಮಿಯನ್ನು ಆರ್ಟ್ ಆಫ್ ಲಿವಿಂಗ್ ಆಶ್ರಮ ಕಬಳಿಸಿದೆ ಎಂದು ಆರೋಪಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ಆಶ್ರಮದ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಗ್ರೋ ಮೋರ್ ಫುಡ್ ಯೋಜನೆಯ ಅಡಿ ನಗರದ ಲಕ್ಷ್ಮೀಪುರ ಗ್ರಾಮದ ಹನುಮಯ್ಯ ಹಾಗೂ ಇನ್ನಿತರ 7 ಮಂದಿಗೆ, ಕಗ್ಗಲೀಪುರ ಬಳಿ ಬಿಎಂ ಕಾವಲ್ ಸರ್ವೇ ನಂ. 32ರಲ್ಲಿ ತಲಾ 2 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಈ ಜಮೀನಿಗೆ ಸದ್ಯದ ವಾರಸುದಾರರಾಗಿರುವ ದಿವಂಗತ ಹನುಮಯ್ಯ ಅವರ ಸೊಸೆ ರಂಗಮ್ಮ ಅವರಿಗೆ ಗೊತ್ತಿಲ್ಲ
ದಂತೆ ಆರ್ಟ್ ಆಫ್ ಲಿವಿಂಗ್ ಆಶ್ರಮದ ಹೆಸರಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದ ಸಮತಾ ಸೈನಿಕ ದಳದ ಕಾರ್ಯರ್ತರು ಆಶ್ರಮದ ಮುಂದೆ ಪ್ರತಿಭಟನೆ ನಡೆಸಿದರು.
‘ಅಕ್ರಮವಾಗಿ ಜಮೀನು ವರ್ಗಾವಣೆಯಾಗಿರುವ ಬಗ್ಗೆ ಹಲವಾರು ಬಾರಿ ಆಶ್ರಮದ ಗಮನಕ್ಕೆ ತರಲಾಗಿದೆ. ಜಮೀನು ಹಿಂದಿರುಗಿಸುವ ಬಗ್ಗೆ ಆಶ್ರಮದ ವತಿಯಿಂದ ಈವರೆಗೆ ಯಾವುದೇ ಭರವಸೆ ಬಂದಿಲ್ಲ. ಇನ್ನೂ ಹತ್ತಾರು ಮಂದಿ ನೂರಾರು ಎಕರೆ ಕಳೆದುಕೊಂಡಿರುವ ಮಾಹಿತಿಯಿದೆ. ಸರ್ಕಾರ ಕೂಡಲೇ ಸಮಗ್ರ ತನಿಖೆ ನಡೆಸಬೇಕು’ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಆಗ್ರಹಿಸಿದರು.
ವಕೀಲ ಪ್ರವೀಣ್ ಕುಮಾರ್ ಮಾತನಾಡಿ, ‘ರೈತರ, ಸರ್ಕಾರದ ಭೂಮಿ ಗುಳುಂ ಆಗಿದೆ. ತನಿಖೆ ನಡೆದರೆ ಎಲ್ಲಾ ಸತ್ಯಾಸತ್ಯತೆ ಹೊರ ಬರಲಿದೆ’ ಎಂದು ಆರೋಪಿಸಿದರು. ಸ್ಥಳಕ್ಕೆ ಬಂದ ಬೆಂಗಳೂರು ದಕ್ಷಿಣ ಜಿಲ್ಲೆ ಎ.ಸಿ. ರಘುನಂದನ್, ದಾಖಲಾತಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.