ಕೆಂಗೇರಿ: ಜನರಿಂದ ಹಣ ಪಡೆದು ನೀರು ಬಿಡುವುದು ಮತ್ತೊಮ್ಮೆ ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ಟಿ.ಸೋಮಶೇಖರ್ ಎಚ್ಚರಿಸಿದರು.
ಜಲಮಂಡಳಿ ಅಧಿಕಾರಿಗಳ ಜತೆಗೆ ಕೆಂಗೇರಿ ವಾರ್ಡ್‌ನ ಬಾಪೂಜಿ ಕಾಲೊನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
‘ನೀರು ವಿತರಣೆಯಲ್ಲಿ ತಾರತಮ್ಯ ಆಗಬಾರದು. ಎಲ್ಲರಿಗೂ ನೀರು ದೊರಕುವಂತೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು‘ ಎಂದು ತಾಕೀತು ಮಾಡಿದರು.
‘ಬಿಸಿಲಿನ ತಾಪಕ್ಕೆ ನೀರಿನ ಸಮಸ್ಯೆ ನಗರದಲ್ಲಿ ಮತ್ತಷ್ಟು ಉಲ್ಬಣಗೊಂಡಿದೆ. ನೀರುಗಂಟಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರ ಅಳಲು: ಬಾಪೂಜಿ ಕಾಲೊನಿಯಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಮೂರು ದಿನಕ್ಕೆ ಒಂದು ಬಾರಿ ಕಾವೇರಿ ನೀರು ಹಂಚಿಕೆ ಮಾಡಲಾಗುತ್ತಿದೆ. ನೀರಿಗಾಗಿ ಮಕ್ಕಳು, ಹೆಂಗಸರು, ವೃದ್ದರು ಅಲೆದಾಡುವಂತಾಗಿದೆ ಎಂದು ಮಹಿಳೆಯರು ಅಲವತ್ತುಕೊಂಡರು.
ಬಿಡಬ್ಲ್ಯುಎಸ್‌ಎಸ್‌ಬಿ ಎಇಇ ದೀಪಕ್ ಮಾತನಾಡಿ, ‘ಬೆಂಗಳೂರು ಜಲಮಂಡಳಿ ವತಿಯಿಂದ ಕೆಂಗೇರಿ ವ್ಯಾಪ್ತಿಯಲ್ಲಿ ಹೊಸ ಬೋರ್‌ವೆಲ್ ಕೊರೆಸಲಾಗಿದೆ. ಶೀಘ್ರದಲ್ಲೇ ಬಾಪೂಜಿ ಕಾಲೊನಿಯ ನೀರಿನ ಸಮಸ್ಯೆ ಬಗೆಹರಿಸಲಾಗುವುದು ತಿಳಿಸಿದರು.
ಬೆಂಗಳೂರು ಜಲಮಂಡಳಿ ಎಇ ರಾಹುಲ್, ಕೇಬಲ್ ಹರೀಶ್, ಟಿ.ಪ್ರಭಾಕರ್, ಕೆ.ಆರ್.ಮೂರ್ತಿ, ಶ್ರೀನಿವಾಸ್, ಶಿವಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.