ಬೆಂಗಳೂರು: ‘ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೊಮ್ಮೆ ಕೆಪೆಕ್ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಸಮಾವೇಶ ಆಯೋಜಿಸಲಿದ್ದು, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲಾಗುತ್ತದೆ’ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್ ತಿಳಿಸಿದರು.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ(ಕೆಪೆಕ್)ದಿಂದ ಶುಕ್ರವಾರ ಆಯೋಜಿಸಿದ್ದ ಕೆಪೆಕ್ ಉತ್ಪಾದಕರ ಮತ್ತು ಮಾರುಕಟ್ಟೆದಾರರ ಸಮಾವೇಶ– 2024ನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಂಸ್ಕರಣೆ ಕೆಲಸ ನಿರ್ವಹಿಸುವ ಉದ್ದಿಮೆಗಳಿಗೆ ಮಾರುಕಟ್ಟೆಯ ಅವಶ್ಯಕತೆ ಇದೆ. ಕೆಲವೊಮ್ಮೆ ಸಮರ್ಪಕ ಮಾರುಕಟ್ಟೆ ಸಿಗದೇ ಉದ್ದಿಮೆದಾರರು ನಷ್ಟ ಅನುಭವಿಸಬೇಕಾಗುತ್ತದೆ. ಕಿರು ಉದ್ದಿಮೆದಾರರು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘದವರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಕೆಪೆಕ್ ಸೇರಿದಂತೆ ವಿವಿಧ ಇಲಾಖೆಗಳು ರೈತ ಉದ್ದಿಮೆದಾರರು ಮತ್ತು ಮಾರಾಟಗಾರರಿಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತವೆ. ರೈತರು, ರೈತ ಉದ್ದಿಮೆದಾರರು, ಈ ಸಂಪರ್ಕವನ್ನು ವ್ಯಾಪಾರವಾಗಿ ಪರಿವರ್ತಿಸಿಕೊಳ್ಳಬೇಕು’ ಎಂದು ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್ ಸಲಹೆ ನೀಡಿದರು.
‘ಉದ್ದಿಮೆ ಆರಂಭಿಸುವ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಉಚಿತ ತರಬೇತಿ ನೀಡಲಾಗುತ್ತದೆ. ಇದು ಪ್ರಾಯೋಗಿಕ ತರಬೇತಿಯಾಗಿದ್ದು, ಆಸಕ್ತರು ಇದನ್ನು ಬಳಸಿಕೊಳ್ಳಬಹುದು' ಎಂದರು.
‘ಗ್ರಾಮೀಣ ಉತ್ಪನ್ನಗಳು ತಾಲ್ಲೂಕು, ಹೋಬಳಿ, ಜಿಲ್ಲಾಮಟ್ಟದಲ್ಲಿ ಮಾರಾಟವಾಗುತ್ತಿದ್ದವು. ಈಗ ಅವುಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ’ ಎಂದು ತಿಳಿಸಿದರು.
ಸಮಾವೇಶದಲ್ಲಿ ಆಹಾರ ಸಂಸ್ಕರಣೆ ಹಾಗೂ ಕಟಾವು ತಂತ್ರಜ್ಞಾನ ವಿಭಾಗದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಮಾತನಾಡಿದರು. ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ.ಶಿವಕುಮಾರ್, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಮಹೇಶ್ ಶಿರೂರ್, ನಿರ್ದೇಶಕ ಎಂ.ಎಚ್. ಬಂಥನಾಳ, ಕೃಷಿ ಇಲಾಖೆಯ ನಿರ್ದೇಶಕ ಜಿ.ಟಿ. ಪುತ್ರ, ವಿಟಿಪಿಸಿ ನಿರ್ದೇಶಕ ಬಿ.ಕೆ. ಶಿವಕುಮಾರ್, ಕೆಪೆಕ್ ಅಧ್ಯಕ್ಷ ಬಿ.ಎಚ್. ಹರೀಶ್ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಿರು ಉದ್ದಿಮೆದಾರರು ರೈತ ಉತ್ಪಾದಕ ಸಂಸ್ಥೆಗಳು ಸ್ವಸಹಾಯ ಸಂಘಗಳು ಸೇರಿದಂತೆ ಒಟ್ಟು 200ಕ್ಕೂ ಅಧಿಕ ಉತ್ಪಾದಕರು ಭಾಗವಹಿಸಿದ್ದರು. ಐಟಿಸಿ ಎಂಟಿಆರ್ ರಿಲಯನ್ಸ್ ಜಿಯೊ ಮಾರ್ಟ್ ಫ್ಲಿಪ್‌ಕಾರ್ಟ್ ಸೇರಿದಂತೆ 40 ಕಾರ್ಪೊರೇಟ್ ಹಾಗೂ ಚಿಲ್ಲರೆ ಮಾರಾಟಗಾರರು ಇ-ಕಾಮರ್ಸ್ ಮಾರುಕಟ್ಟೆದಾರರು ಖರೀದಿದಾರರು ಹಾಗೂ ರಫ್ತುದಾರರು ಪಾಲ್ಗೊಂಡಿದ್ದರು. ಉದ್ಯಮಿಗಳಿಂದ ಉತ್ಪನ್ನಗಳ ಖರೀದಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಒಪ್ಪಂದ ನಡೆಯಿತು. ಸಮಾವೇಶದಲ್ಲಿ ಕೆಪೆಕ್ ನೆರವಿನೊಂದಿಗೆ ಉದ್ಯಮ ನಡೆಸುತ್ತಿರುವ ರಾಜ್ಯದ ವಿವಿಧ ಭಾಗಗಳಲ್ಲಿರುವ ರೈತ ಉತ್ಪಾದಕ ಸಂಸ್ಥೆಗಳು ಸೇರಿದಂತೆ 35ಕ್ಕೂ ಹೆಚ್ಚು ರೈತ ಉದ್ದಿಮೆಗಳ ಮಳಿಗೆಗಳಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.