ಬೆಂಗಳೂರು: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ’ ಪ್ರಶಸ್ತಿಯನ್ನು ‘ಪ್ರಜಾವಾಣಿ’ ಡೆಪ್ಯೂಟಿ ಎಡಿಟರ್ ಎಂ.ನಾಗರಾಜ ಅವರಿಗೆ ಶನಿವಾರ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ನಿವೃತ್ತ ಪ್ರಾಧ್ಯಾಪಕ ಕೆ.ವಿ.ನಾಗರಾಜ್ ಅವರು, ‘ಹಿಂದೆ ಜಾಹೀರಾತು ಬೇರೆ, ಸುದ್ದಿ ಬೇರೆಯಾಗಿತ್ತು. ಈಗ ಪತ್ರಿಕೋದ್ಯಮವು ಸುದ್ದಿ ತಯಾರಿಸುವ ಕೈಗಾರಿಕೆಗಳಾಗಿವೆ. ಹಾಗಾಗಿ ಪತ್ರಿಕೋದ್ಯಮ ವಾಣಿಜ್ಯೋದ್ಯಮವಾಗಿದೆ’ ಎಂದರು.
ಇದಕ್ಕೆ ಪರ್ಯಾಯವಾಗಿ ಅಮೆರಿಕದಲ್ಲಿ ‘ಮೈಂಡ್‌ಫುಲ್ ಜರ್ನಲಿಸಂ’ ಆರಂಭವಾಗಿದೆ. ಬುದ್ಧನ ಅಷ್ಟಮಾರ್ಗಗಳನ್ನು ಅಳವಡಿಸಿಕೊಂಡು ಇದು ನಡೆಯುತ್ತಿದೆ. ಸ್ಪರ್ಧೆ ಇರಬಾರದು. ಸಹಕಾರ ಇರಬೇಕು ಎಂಬುದು ಅದರ ತತ್ವ. ಇದೇ ತತ್ವದ ಆಧಾರದ ಪತ್ರಿಕೋದ್ಯಮ ನಮ್ಮ ದೇಶದಲ್ಲಿಯೂ ಸಾಧ್ಯವೇ ಎಂಬ ಚಿಂತನೆ ಆಗಬೇಕು ಎಂದರು.
ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಎಲ್ಲವೂ ಸುದ್ದಿ, ಎಲ್ಲರೂ ಪತ್ರಕರ್ತರು ಎಂಬ ಮಾತುಗಳಿವೆ. ಇದು ಸರಿಯಲ್ಲ. ವೃತ್ತಿಪರ ಚೌಕಟ್ಟು ಇಲ್ಲದೇ, ಸುದ್ದಿಯನ್ನು ಪರಿಷ್ಕರಿಸದೇ ಪ್ರಕಟಿಸುವುದು ಪತ್ರಿಕೋದ್ಯಮವಾಗದು ಎಂದು ಅಭಿಪ್ರಾಯಪಟ್ಟರು.
ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಮಾತನಾಡಿ, ‘ಬಿಬಿಎಂಪಿಯಲ್ಲಿ ಪತ್ರಕರ್ತರ ಆರೋಗ್ಯ ನಿಧಿಯಾಗಿ ವರ್ಷಕ್ಕೆ ₹ 2 ಕೋಟಿ ಮೀಸಲಿಡಲಾಗುತ್ತಿದೆ. ಅವಶ್ಯ ಇರುವ ಪತ್ರಕರ್ತರು ಇದರ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.
ಪತ್ರಕರ್ತ ಬಿ.ಎಸ್.ಅರುಣ್ ಮಾತನಾಡಿ, ‘ಮಾಧ್ಯಮಗಳ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳಲ್ಲಿ ನಿಖರ ಯಾವುದು? ನಕಲಿ ಯಾವುದು? ಎಂದು ಪತ್ತೆ ಹಚ್ಚುವುದೇ ಕಷ್ಟದ ಕೆಲಸವಾಗಿದೆ’ ಎಂದರು.
ಗಾಂಧಿಭವನ ಅಧ್ಯಕ್ಷ ವೂಡೇ ಪಿ. ಕೃಷ್ಣ ಮಾತನಾಡಿ, ‘ಮಾಧ್ಯಮಗಳು ಘನತೆಯನ್ನು ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಮುಖ್ಯವಾಹಿನಿಯ ಮುದ್ರಣ ಮಾಧ್ಯಮಗಳು ಮಾತ್ರ ಘನತೆ, ಗಟ್ಟಿತನ ಉಳಿಸಿಕೊಂಡಿವೆ’ ಎಂದು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.