ADVERTISEMENT

ಖರ್ಗೆ ಪುತ್ರನ ಟ್ರಸ್ಟ್‌ಗೆ ನಿಯಮಾನುಸಾರ ಸಿ.ಎ. ನಿವೇಶನ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 8:54 IST
Last Updated 26 ಆಗಸ್ಟ್ 2024, 8:54 IST
<div class="paragraphs"><p> ಎಂ.ಬಿ. ಪಾಟೀಲ </p></div>

ಎಂ.ಬಿ. ಪಾಟೀಲ

   

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕ್ ನಲ್ಲಿ ಸಿ.ಎ. ನಿವೇಶನವನ್ನು ಕಾನೂನಿನ ಪ್ರಕಾರವೇ ನಿಗದಿತ ಬೆಲೆಗೆ ಹಂಚಿಕೆ ಮಾಡಲಾಗಿದೆ. ಅವರು ಅಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ಬಿಜೆಪಿ ನಾಯಕ ಲಹರ್ ಸಿಂಗ್ ಸೀರೊಯಾ ಆರೋಪಿಸಿರುವಂತೆ ಯಾವ ನಿಯಮವೂ ಉಲ್ಲಂಘನೆ ಆಗಿಲ್ಲ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಹೇಳಿದರು.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, 'ರಾಹುಲ್ ಖರ್ಗೆ ಅವರು ಐಐಟಿ ಪದವೀಧರರಾಗಿದ್ದಾರೆ. ಅವರ ಕುಟುಂಬವು ನಾನಾ ಬಗೆಯ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಕೆಐಎಡಿಬಿ ನಿಯಮಗಳ ಪ್ರಕಾರ ಸಿ.ಎ ನಿವೇಶನಗಳಲ್ಲಿ ಆರ್ & ಡಿ ಕೇಂದ್ರಗಳು, ಉತ್ಕೃಷ್ಟತಾ ಕೇಂದ್ರಗಳು, ತಾಂತ್ರಿಕ ಸಂಸ್ಥೆಗಳು, ಕೌಶಲ್ಯಾಭಿವೃದ್ಧಿ, ಸರ್ಕಾರಿ ಕಚೇರಿಗಳು, ಬ್ಯಾಂಕು, ಆಸ್ಪತ್ರೆ, ಹೋಟೆಲ್, ಪೆಟ್ರೋಲ್ ಬಂಕ್, ಕ್ಯಾಂಟೀನ್, ವಸತಿ ಸೌಲಭ್ಯ ಇತ್ಯಾದಿಗಳ ಅಭಿವೃದ್ಧಿಗೆ ಅವಕಾಶವಿದೆ. ಆಸಕ್ತರು ಯಾರು ಬೇಕಾದರೂ ಇದಕ್ಕೆ ಪ್ರಯತ್ನಿಸಬಹುದು. ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಶಿಫಾರಸಿನ ನಂತರವಷ್ಟೇ ಇವುಗಳ ಹಂಚಿಕೆಯಾಗುತ್ತದೆ ಎಂದರು.

ADVERTISEMENT

'ಏರೋಸ್ಪೇಸ್ ಪಾರ್ಕಿನಲ್ಲಿ ರಾಹುಲ್ ಅವರಿಗೆ ಕೈಗಾರಿಕಾ ನಿವೇಶನವನ್ನೇನೂ ಕೊಟ್ಟಿಲ್ಲ. ಬದಲಿಗೆ, ಸಿ.ಎ.ನಿವೇಶನವನ್ನು ಆರ್ ಆ್ಯಂಡ್ ಡಿ ಕೇಂದ್ರ ಸ್ಥಾಪನೆಗಾಗಿ ನಿಗದಿತ ಬೆಲೆಗೇ ಕೊಡಲಾಗಿದೆ. ಇದರಲ್ಲಿ ಅವರಿಗೆ ಯಾವ ರಿಯಾಯಿತಿಯನ್ನೂ ನೀಡಿಲ್ಲ’ ಎಂದೂ ಸ್ಪಷ್ಟಪಡಿಸಿದರು.

'ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೈಗಾರಿಕಾ ಪ್ರದೇಶದಲ್ಲೇ 116 ಎಕರೆಯನ್ನು ಕೇವಲ ₹ 50 ಕೋಟಿಗೆ ಕೊಡಲಾಗಿದೆ. ಅದರಿಂದ ₹ 137 ಕೋಟಿ ಬೊಕ್ಕಸಕ್ಕೆ ನಷ್ಟವಾಗಿದೆ. ಲಹರ್ ಸಿಂಗ್ ಅವರು ಈ ಬಗ್ಗೆಯೂ ಚಕಾರ ಎತ್ತಬಹುದಲ್ಲವೇ' ಎಂದು ಅವರು ಪ್ರಶ್ನಿಸಿದರು.

'ಹಿಂದೆಲ್ಲ ಕೆಐಎಡಿಬಿ ಮಂಡಳಿಯೇ ಸಿ.ಎ. ನಿವೇಶನಗಳನ್ನು ಹಂಚುತ್ತಿತ್ತು. ಆದರೆ, ನಾನು ಸಚಿವನಾದ ಮೇಲೆ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಅನುಮೋದನೆ ನೀಡುವ ಹಾಗೆ ಪಾರದರ್ಶಕ ವ್ಯವಸ್ಥೆ ಜಾರಿ‌ ಮಾಡಲಾಗಿದೆ. ಅಲ್ಲದೆ ಮೊದಲ ಬಾರಿಗೆ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟರಿಗೆ ಶೇ 24.10ರಷ್ಟು ಮೀಸಲಾತಿ‌ ಕಲ್ಪಿಸಲಾಗಿದೆ. ಲಹರ್ ಸಿಂಗ್ ಈ ಸತ್ಯವನ್ನು ಅರಿತು ಮಾತನಾಡುವುದು ಒಳ್ಳೆಯದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.