ADVERTISEMENT

ಕೆಐಎಡಿಬಿಗೆ ನಕ್ಷೆ ಮಂಜೂರು ಅಧಿಕಾರವಿಲ್ಲ!

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 0:21 IST
Last Updated 31 ಡಿಸೆಂಬರ್ 2023, 0:21 IST
   

ಬೆಂಗಳೂರು: ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವ್ಯಾಪ್ತಿಯ ಕಟ್ಟಡಗಳಿಗೂ ನಕ್ಷೆ ಮಂಜೂರು ಅಧಿಕಾರ ಬಿಬಿಎಂಪಿಗೆ ಮಾತ್ರ ಇದ್ದು, ಇನ್ನು ಮುಂದೆ ಅದನ್ನು ಪಾಲಿಕೆಯೇ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂಬ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ, ಕರ್ನಾಟಕ ಮುನಿಸಿಪಲ್‌ ಕಾಯ್ದೆ (ಕೆಎಂಸಿ) ಪ್ರಕಾರ, ಆಯಾ ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯ ಎಲ್ಲ ಕಟ್ಟಡ ಹಾಗೂ ಬಡಾವಣೆಗಳಿಗೆ ನಕ್ಷೆ ಮಂಜೂರು ಮಾಡಬೇಕು. ಬಿಬಿಎಂಪಿ ಕಾಯ್ದೆ ಪ್ರಕಾರ, ಈ ಅಧಿಕಾರ ಪಾಲಿಕೆಗಿದೆ. ಆದರೆ, ಕೆಐಎಡಿಬಿಗೆ ಇಂತಹ ಕಾಯ್ದೆ ಅಥವಾ ಅಧಿಸೂಚನೆಯ ಮಾನ್ಯತೆ ಇಲ್ಲ. ಆದ್ದರಿಂದ ಬಿಬಿಎಂಪಿಯಿಂದಲೇ ನಕ್ಷೆ ಮಂಜೂರು ಪಡೆಯಬೇಕೆಂದು ಸೂಚಿಸಬೇಕು ಎಂದು ಪ್ರಸ್ತಾವದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿಯಿಂದ ಹತ್ತು ದಿನಗಳ ಹಿಂದೆ ಈ ಪ್ರಸ್ತಾವ ಸಲ್ಲಿಸಲಾಗಿದ್ದು, ಇದನ್ನು ಸರ್ಕಾರ ಮಾನ್ಯ ಮಾಡಿದರೆ ಪಾಲಿಕೆಗೆ ಕೋಟ್ಯಂತರ ವರಮಾನ ಸಂಗ್ರಹವಾಗಲಿದೆ ಎಂಬ ಲೆಕ್ಕಾಚಾರವಿದೆ.

ADVERTISEMENT

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರಿನಲ್ಲಿ ಕಟ್ಟಡ/ ಬಡಾವಣೆ ನಕ್ಷೆ ಮಂಜೂರಿನ ಸಕ್ಷಮ ಪ್ರಾಧಿಕಾರವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರು ಅಧಿಕಾರವನ್ನು ಬಿಬಿಎಂಪಿಗೆ ಪ್ರತ್ಯಾಯೋಜಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಕೆಐಎಡಿಬಿಗೆ ನಗರದಲ್ಲಿ ನಕ್ಷೆ ಮಂಜೂರು ಅಧಿಕಾರವನ್ನು ಆದೇಶದ ಮೂಲಕ ನೀಡಲಾಗಿದೆ.  ಈ ಆದೇಶವನ್ನು ವಾಪಸ್ ಪಡೆದು, ಬಿಬಿಎಂಪಿಗೇ ನಕ್ಷೆ ಮಂಜೂರು ಅವಕಾಶವನ್ನು ಮುಂದುವರಿಸಬೇಕು ಎಂದು ಸರ್ಕಾರವನ್ನು ಕೋರಲಾಗಿದೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ತಿಳಿಸಿದರು.

ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ, ಕೆಎಂಸಿ ಕಾಯ್ದೆ ಪ್ರಕಾರ, ಸೆಕ್ಷನ್‌ 15 ಹಾಗೂ ಬಿಬಿಎಂಪಿ ಕಾಯ್ದೆ ಪ್ರಕಾರ ಸೆಕ್ಷನ್‌ 240ರಲ್ಲಿ ಕಟ್ಟಡ ನಕ್ಷೆ ಅನುಮೋದನೆ ಪಡೆಯಬೇಕು.  ಈ ಕಾಯ್ದೆಗಳಲ್ಲಿಲ್ಲದ ಇನ್ಯಾವ ಸಂಸ್ಥೆಯೂ ಕಟ್ಟಡ ಮಂಜೂರು ಮಾಡಲು ಶಾಸನಬದ್ಧ ಅಧಿಕಾರವನ್ನು ಹೊಂದಿಲ್ಲ.

ಸುಪ್ರೀಂ ಕೋರ್ಟ್‌ನ ಕೆಲವು ಆದೇಶಗಳನ್ನೂ ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದ್ದು, ಸ್ಥಳೀಯ ಸಂಸ್ಥೆ ಮಾತ್ರ ನಕ್ಷೆ ಮಂಜೂರು ಮಾಡಬಹುದು ಎಂಬ ಆದೇಶದಲ್ಲಿನ ಸ್ಪಷ್ಟ ಮಾಹಿತಿಯನ್ನು ವಿವರಿಸಲಾಗಿದೆ. ಕಾನೂನು ಪ್ರಕಾರ, ಕೆಐಎಡಿಬಿ ನಕ್ಷೆ ಮಂಜೂರು ಮಾಡುವ ಅಧಿಕಾರ ಹೊಂದಿಲ್ಲ ಎಂದು ಹಲವು ಉದಾಹರಣೆಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವದಲ್ಲಿ ಮಾಹಿತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.