ADVERTISEMENT

ಕೆಐಎಡಿಬಿ ಭೂಸ್ವಾಧೀನ: ಎಕರೆಗೆ ₹ 2.20 ಕೋಟಿ ಪರಿಹಾರ ನಿಗದಿಗೆ ರೈತರ ಆಗ್ರಹ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೆಐಎಡಿಬಿ ಭೂಸ್ವಾಧೀನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:25 IST
Last Updated 22 ಅಕ್ಟೋಬರ್ 2024, 15:25 IST
   

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಕೋಡಿಹಳ್ಳಿ, ನಾಗದೇನಹಳ್ಳಿ ಹಾಗೂ ಆದಿನಾರಾಯಣ ಹೊಸಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಕೃಷಿ ಜಮೀನುಗಳಿಗೆ ಪ್ರತಿ ಎಕರೆಗೆ ₹2.20 ಕೋಟಿ ಪರಿಹಾರ ನೀಡಬೇಕು ಎಂದು ‘ಕೆಐಎಡಿಬಿ ಭೂಸ್ವಾಧೀನ ವಿರುದ್ಧ ರೈತ ಹೋರಾಟ ಸಮಿತಿ’ ಆಗ್ರಹಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ನರಸಿಂಹಮೂರ್ತಿ, ‘ಹಣ್ಣು, ತರಕಾರಿ ಬೆಳೆಯುತ್ತಿರುವ ಫಲವತ್ತಾದ ಕೃಷಿ ಜಮೀನು ಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರದ ಎಲ್ಲ ಕಾನೂನುಗಳನ್ನು ಕೆಐಎಡಿಬಿ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. 2013ರ ಭೂಸ್ವಾಧೀನ ಮತ್ತು ಪರಿಹಾರ ನಿಗದಿ ಕಾಯ್ದೆಯನ್ನು ಪಾಲಿಸಿಲ್ಲ’ ಎಂದು ದೂರಿದರು. 

‘ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಂಡಿರುವ ರೈತರು ಕೆಐಎಡಿಬಿ ಅಧಿಕಾರಿಗಳ ರೈತವಿರೋಧಿ ಧೋರಣೆ ಖಂಡಿಸಿ 281 ದಿನಗಳಿಂದಲೂ ಧರಣಿ ನಡೆಸುತ್ತಿದ್ದಾರೆ. ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಲವಾರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಪ್ರತಿ ಎಕರೆಗೆ ₹ 1.70 ಕೋಟಿ ಪರಿಹಾರ ನಿಗದಿ ಮಾಡಲಾಗಿದೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ಪ್ರತಿ ಎಕರೆಗೆ ₹ 2.20 ಕೋಟಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ನಿಯ ಹೆಸರಿನಲ್ಲಿದ್ದ ಜಮೀನಿಗೆ ಪರಿಹಾರ ಪಡೆಯುವಾಗ ಮಾತ್ರ ಮಾರುಕಟ್ಟೆ ಬೆಲೆಗಿಂತಲು ಮೂರು ಪಟ್ಟು ಪರಿಹಾರ ಅಥವಾ ಅದೇ ಬೆಲೆಯ ಬದಲಿ ಜಾಗ ಪಡೆದಿದ್ದಾರೆ. ಅದೇ ಮಾದರಿಯಲ್ಲೇ ನಮ್ಮ ಕೃಷಿ ಜಮೀನಿಗೂ ಕೆಐಎಡಿಬಿ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಸಮಿತಿ ಸದಸ್ಯರಾದ ರಮೇಶ್, ಮಂಜುನಾಥ್, ಕೃಷ್ಣಮೂರ್ತಿಗೌಡ, ಆನಂದ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.