ಬೆಂಗಳೂರು: ಚೈನ್ ಲಿಂಕ್ ವ್ಯವಹಾರದಲ್ಲಿ ತಾವು ಹೂಡಿದ್ದ ಬಂಡವಾಳವನ್ನು ವಸೂಲಿ ಮಾಡಲು ಆ ಕಂಪನಿಯ ಉದ್ಯೋಗಿಯನ್ನೇ ಅಪಹರಣ ಮಾಡಿದ್ದ ಆಂಧ್ರಪ್ರದೇಶದ ಮೂವರು ಮೆಕ್ಯಾನಿಕ್‌ಗಳನ್ನು ಶಿವಾಜಿನಗರ ಪೊಲೀಸರು ‘ಪ್ರೇಮಿ’ಗಳ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಡಿ.9ರ ರಾತ್ರಿ ಕ್ವೀನ್ಸ್ ರಸ್ತೆಯಿಂದ ಕಾರ್ತಿಕ್ ಎಂಬುವರನ್ನು ಅಪಹರಿಸಿದ್ದ ಆರೋಪಿಗಳು, ಅವರನ್ನು ಚಿತ್ತೂರಿನ ತಮ್ಮ ಮನೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಹಣ ಕೊಡುವುದಾಗಿ ಆರೋಪಿಗಳನ್ನು ಮುಳಬಾಗಿಲಿಗೆ ಕರೆಸಿಕೊಂಡು ವಶಕ್ಕೆ ಪಡೆದಿದ್ದಾರೆ.
ಮಹಮದ್ ಶೇಖ್, ಗೌಸ್ ಪೀರ್ ಹಾಗೂ ಮಹಮದ್ ಹಫೀಜ್ ಎಂಬುವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿ ಮಹೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಚಿತ್ತೂರಿನಲ್ಲಿ ಗೃಹಬಂಧನದಲ್ಲಿದ್ದ ಕಾರ್ತಿಕ್ ಅವರನ್ನು ಸುರಕ್ಷಿತವಾಗಿ ನಗರಕ್ಕೆ ಕರೆತರುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ಹಣ ಹೂಡಿಸಿದ ಹಸೀನಾ: ರಾಜಭವನ ರಸ್ತೆಯಲ್ಲಿರುವ ‘ವಿಹಾನ್ ಡೈರೆಕ್ಸ್ ಸೆಲ್ಲಿಂಗ್ ಕಂಪನಿ’ಯಲ್ಲಿ ಕಾರ್ತಿಕ್ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆ ಕಂಪನಿಯು ಚೈನ್ ಲಿಂಕ್ ಮಾದರಿಯಲ್ಲಿ ವ್ಯವಹಾರ ನಡೆಸುತ್ತದೆ. ಯಾರಾದರೂ ಹಣ ಹೂಡಿಕೆ ಮಾಡಿ ಅಲ್ಲಿ ಹೆಸರು ನೊಂದಾಯಿಸಿಕೊಂಡರೆ, ಅವರು ಇನ್ನೂ ಐದು ಮಂದಿಯನ್ನು ಸದಸ್ಯರನ್ನಾಗಿ ನೇಮಿಸಬೇಕು. ಆಗಮಾತ್ರ ಅವರಿಗೆ ಕಂಪನಿ ಕಮಿಷನ್ ಕೊಡುತ್ತದೆ.
ಹಣ ಕಟ್ಟಿ ತಮ್ಮ ಹೆಸರು ನೊಂದಣಿ ಮಾಡಿಸಿಕೊಂಡಿದ್ದ ಹಸೀನಾ ಎಂಬುವರು, ಕಮಿಷನ್ ಪಡೆಯಬೇಕೆಂದರೆ ಕಂಪನಿಗೆ ಹೊಸ ಸದಸ್ಯರನ್ನು ಕರೆತರಬೇಕಿತ್ತು. ಆಗ ತಮ್ಮ ಸಂಬಂಧಿಗಳಾದ ಗೌಸ್‌ಪೀರ್, ಹಫೀಜ್, ಮಹಮದ್ ಶೇಖ್, ಆದಂ ಪಾಷಾ ಹಾಗೂ ಅಬುಬಜಾರ್ ಎಂಬುವರನ್ನು ಭೇಟಿಯಾಗಿದ್ದರು. ‘ಎಷ್ಟು ದಿನ ಮೆಕ್ಯಾನಿಕ್‌ಗಳಾಗಿಯೇ ಇರುತ್ತೀರಾ? ಕಂಪನಿಗೆ ನೀವು ಸದಸ್ಯರಾದರೆ, ಪ್ರತಿ ತಿಂಗಳ ಬಡ್ಡಿ ರೂಪದಲ್ಲಿ ಹಣ ಬರುತ್ತದೆ. ₹ 2.5 ಲಕ್ಷ ಕಟ್ಟಿದರೆ ತಿಂಗಳಿಗೆ ₹ 12 ಸಾವಿರವನ್ನು ಕಂಪನಿ ನಿಮಗೆ ಕೊಡುತ್ತದೆ’ ಎಂದು ಹೇಳಿದ್ದರು.
ಅವರ ಮಾತನ್ನು ನಂಬಿ ಹಣ ಹೂಡಿಕೆ ಮಾಡಿದ್ದ ಈ ಮೆಕ್ಯಾನಿಕ್‌ಗಳಿಗೆ ಎರಡು ತಿಂಗಳು ಕಳೆದರೂ ಬಡ್ಡಿ ಬಂದಿರಲಿಲ್ಲ. ಕಂಪನಿಗೆ ತೆರಳಿ ಈ ಬಗ್ಗೆ ಪ್ರಶ್ನಿಸಿದಾಗ, ‘ಇದು ಚೈನ್‌ಲಿಂಕ್ ವ್ಯವಹಾರ. ನೀವು ಹೊಸ ಸದಸ್ಯರನ್ನು ನೇಮಿಸಿದರಷ್ಟೇ ಕಮಿಷನ್ ಸಿಗುತ್ತದೆ’ ಎಂದಿದ್ದಾರೆ. ಈ ವಿಚಾರವನ್ನು ಮುಚ್ಚಿಟ್ಟಿದ್ದ ಹಸೀನಾ, ಅಷ್ಟರಲ್ಲಾಗಲೇ ಸದಸ್ಯತ್ವ ತೊರೆದು ನಾಪತ್ತೆಯಾಗಿದ್ದರು.
ಇದರಿಂದ ದಿಕ್ಕು ತೋಚದಂತಾದ ಮೆಕ್ಯಾನಿಕ್‌ಗಳು, ತಮ್ಮ ಹಣ ಮರಳಿಸುವಂತೆ ಕಂಪನಿಗೆ ದುಂಬಾಲು ಬಿದ್ದಿದ್ದರು. ಅದಕ್ಕೆ ಅಧಿಕಾರಿಗಳು ಪೂರಕವಾಗಿ ಸ್ಪಂದಿಸದಿದ್ದಾಗ ಕುಪಿತಗೊಂಡ ಆರೋಪಿಗಳು, ಉದ್ಯೋಗಿಗಳನ್ನೇ ಅಪಹರಿಸಿ ಹಣ ವಸೂಲಿ ಮಾಡುವ ನಿರ್ಧಾರಕ್ಕೆ ಬಂದಿದ್ದರು.
ಕ್ವೀನ್ಸ್ ರಸ್ತೆಯ ಕೊಠಡಿಯೊಂದರಲ್ಲಿ ಕಂಪನಿಯು ಡಿ.9ರ ಸಂಜೆ ಗ್ರಾಹಕರ ಸಭೆ ಆಯೋಜಿಸಿತ್ತು. ಈ ವಿಚಾರ ತಿಳಿದು ಬಾಡಿಗೆ ಕಾರಿನಲ್ಲಿ ಅಲ್ಲಿಗೆ ತೆರಳಿದ್ದ ಆರೋಪಿಗಳು, ಹಣಕಾಸಿನ ವಿಚಾರ ಮಾತನಾಡಬೇಕೆಂದು ಕಾರ್ತಿಕ್ ಅವರನ್ನು ಹೊರಗೆ ಕರೆಸಿಕೊಂಡಿದ್ದರು. ನಂತರ ಕಾರಿನಲ್ಲಿ ಅಪಹರಿಸಿಕೊಂಡು ಚಿತ್ತೂರಿಗೆ ಕರೆದೊಯ್ದಿದ್ದರು.
ಬಳಿಕ ಇನ್ನೊಬ್ಬ ಉದ್ಯೋಗಿ ಸಂಜೀವ್ ನಾಯಕ್‌ಗೆ ಕರೆ ಮಾಡಿ, ‘ನಾವು ₹ 12 ಲಕ್ಷವನ್ನು ಕಂಪನಿಗೆ ಹೂಡಿಕೆ ಮಾಡಿದ್ದೇವೆ. ಅದನ್ನು ಮರಳಿಸುವವರೆಗೂ ಕಾರ್ತಿಕ್‌ನನ್ನು ಬಿಟ್ಟು ಕಳುಹಿಸುವುದಿಲ್ಲ’ ಎಂದು ಹೇಳಿದ್ದಾರೆ. ಆ ನಂತರ ಸಂಜೀವ್ ಶಿವಾಜಿನಗರ ಠಾಣೆಯ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.