ಬೆಂಗಳೂರು: ದೇಶದಲ್ಲಿ 3 ಲಕ್ಷ ಜನ ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ. ದಾನಿಗಳ ಪ್ರಮಾಣ ಕಡಿಮೆ ಇರುವುದರಿಂದ ವಾರ್ಷಿಕ ಕೇವಲ 10 ಸಾವಿರ ಮಂದಿಗೆ ಕಸಿ ಮಾಡಲು ಸಾಧ್ಯವಾಗಿದೆ ಎಂದುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಜೀವಸಾರ್ಥಕತೆ’ (ಕರ್ನಾಟಕ ಅಂಗಾಂಗ ಕಸಿ ಪ್ರಾಧಿಕಾರ) ಸಂಸ್ಥೆ ಹೇಳಿದೆ.
‘ದೇಶದಲ್ಲಿ ತೀವ್ರತರವಾದ ಮೂತ್ರಪಿಂಡ ಸಮಸ್ಯೆಗೊಳಗಾಗಿ ಅಂತಿಮ ಹಂತ ತಲುಪಿರುವವರ ಪ್ರಮಾಣ ಪ್ರತಿದಿನ ಏರಿಕೆ ಕಾಣುತ್ತಿದೆ. ಪ್ರತಿ ದಶಲಕ್ಷ ಜನರ ಪೈಕಿ ಸುಮಾರು 150 ರಿಂದ 200 ಮಂದಿ ಅಂತಿಮ ಹಂತದ ಮೂತ್ರಪಿಂಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಂತದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಬೇಕಿದೆ’ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.
120 ಕೋಟಿ ಜನಸಂಖ್ಯೆ ಇದ್ದರೂ 10 ಲಕ್ಷ ಜನರ ಪೈಕಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಶೇಕಡ 0.08ರಷ್ಟು ಮಾತ್ರ ಇದೆ.ಸದ್ಯ ರಾಜ್ಯದಲ್ಲಿ 2,662 ಮಂದಿ ಕಿಡ್ನಿ ಕಸಿಗಾಗಿ ಕಾಯುತ್ತಿದ್ದಾರೆ. ಒಬ್ಬ ದಾನಿ ಹೃದಯ, ಮೂತ್ರಪಿಂಡ, ಯಕೃತ್ತು,ಮೇದೋಜ್ಜೀರಕ ಗ್ರಂಥಿ, ಶ್ವಾಸಕೋಶ ದಾನ ಮಾಡಬಹುದು. ಅಂಗಾಂಶ ದಾನದ ಮೂಲಕ 50ಕ್ಕೂ ಹೆಚ್ಚು ಜನರ ಜೀವವನ್ನು ಉಳಿಸಬಹುದು ಎಂದು ಸಂಸ್ಥೆ ಹೇಳಿದೆ.
2016ರಲ್ಲಿ 70 ಅಂಗಾಂಗ ದಾನ ಪ್ರಕರಣಗಳು ನಡೆದಿವೆ. ಈ ಪೈಕಿ 17 ಹೃದಯ, 66 ಯಕೃತ್ತು, 109 ಮೂತ್ರಪಿಂಡ, 2 ಮೇದೋಜ್ಜೀರಕಗಳು, 29 ಹೃದಯ ಕವಾಟಗಳನ್ನು ಕಸಿ ಮಾಡಲಾಗಿದೆ.2017ರಲ್ಲಿ 68 ಅಂಗಾಂಗ ಕಸಿ ನಡೆದಿವೆ.
ಅಂಗಾಂಗ ಕಸಿ ಪ್ರಾಧಿಕಾರ, ದಾನಿ ಕುಟುಂಬಗಳ ಮನವೊಲಿಸಿ ಅಂಗಾಂಗ ದಾನಕ್ಕೆ ಪ್ರೇರಣೆ ನೀಡುವ ಕಾರ್ಯದಲ್ಲಿ ತೊಡಗಿದ್ದು, 2007ರಿಂದ ಇಲ್ಲಿಯವರೆಗೆ 599 ಮೂತ್ರಪಿಂಡಗಳ ದಾನ ನಡೆದಿದೆ. ಈ ಮೂಲಕ ಹಲವರ ಬದುಕಿನಲ್ಲಿ ಹೊಸ ಭರವಸೆ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.