ಬೆಂಗಳೂರು: ‘ಕ್ಯಾನ್ಸರ್ ಪತ್ತೆಗೆ ನೆರವಾಗುವ ‘ಪೆಟ್ ಸ್ಕ್ಯಾನ್’ ಘಟಕಕ್ಕೆ ಶೀಘ್ರದಲ್ಲಿಯೇ ಚಾಲನೆ ದೊರೆ ಯಲಿದೆ. ಖಾಸಗಿ ಆಸ್ಪತ್ರೆಯಲ್ಲಿ ₹ 25 ಸಾವಿರ ಪಾವತಿಸಬೇಕಾದ ಸ್ಕ್ಯಾನ್ ಅನ್ನು ₹ 7,200ಕ್ಕೆ ಮಾಡಲಾಗುತ್ತದೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.
‘ಪೆಟ್ ಸ್ಕ್ಯಾನ್ ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಾದ ಪರೀಕ್ಷೆ. ರಕ್ತದ ಕ್ಯಾನ್ಸರ್ (ಲಿಂಪೋಮಾ), ಲುಕೆಮಿಯಾ, ಕ್ಷಯದಂತಹ ಸೋಂಕುಗಳನ್ನು ಪತ್ತೆ ಹಚ್ಚಲು ಹಾಗೂ ಕ್ಯಾನ್ಸರ್ ಕಾಯಿಲೆಯ ಹಂತಗಳನ್ನು ನಿಖರವಾಗಿ ತಿಳಿಯಲು ಈ ಪರೀಕ್ಷೆ ಸಹಕಾರಿ. ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ದುಬಾರಿಯಾಗಿರುವುದರಿಂದ ಎಲ್ಲರಿಗೂ ಮಾಡಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಸ್ಥೆಯಲ್ಲಿಯೇ ಪ್ರಾರಂಭಿಸಲಾಗುತ್ತಿದೆ’ ಎಂದು ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದ್ದಾರೆ.
‘ಸಂಸ್ಥೆಯಲ್ಲಿ ಈಗಾಗಲೇ ಅಸ್ಥಿ ಮಜ್ಜೆ ಕಸಿ ಘಟಕ ಕಾರ್ಯನಿರ್ವಹಿಸುತ್ತಿದ್ದು, ಮೊದಲಿಗೆ 8 ವರ್ಷದ ಬಾಲಕನಿಗೆ ನಡೆಸಿರುವ ಶಸ್ತ್ರಚಿಕಿತ್ಸೆ ಯಶಸ್ಸಿಯಾಗಿದೆ. ರಾಜ್ಯದಲ್ಲಿ ಅಸ್ಥಿಮಜ್ಜೆ ಘಟಕ ಹೊಂದಿರುವ ಏಕೈಕ ಸರ್ಕಾರಿ ಆಸ್ಪತ್ರೆ ಕಿದ್ವಾಯಿ. ಇದೀಗ ಅಸ್ಥಿಮಜ್ಜೆ ಕಸಿಗೆ ಬೇಡಿಕೆ ಹೆಚ್ಚಿದ್ದು, 40ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದಿದ್ದಾರೆ.
5 ಶಸ್ತ್ರಚಿಕಿತ್ಸಾ ಘಟಕ: ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಐದು ಶಸ್ತ್ರಚಿಕಿತ್ಸಾ ಘಟಕ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿವೆ.ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಶಸ್ತ್ರಚಿಕಿತ್ಸಾ ಘಟಕಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. 2023ರ ಜನವರಿ ವೇಳೆಗೆ ಇನ್ನೂ ಎರಡು ಘಟಕಗಳು ಲಭ್ಯವಾಗಲಿವೆ’ ಎಂದು ತಿಳಿಸಿದ್ದಾರೆ.
‘ವೆಂಕಟೇಶ್ವರ ಧರ್ಮಶಾಲೆಯನ್ನು ನವೀಕರಣ ಮಾಡಲಾಗಿದೆ. ಹೊಸದಾಗಿ ತೀವ್ರ ನಿಗಾ ಘಟಕ (ಐಸಿಯು) ಹಾಗೂಫುಡ್‍ಕೋರ್ಟ್ ನಿರ್ಮಿಸಲಾಗಿದೆ. ಇವು ಸಹ ಶೀಘ್ರವೇ ಉದ್ಘಾಟನೆ ಆಗಲಿವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.