ವರುಣ ಹೆಗಡೆ
ಬೆಂಗಳೂರು: ತಡವಾಗಿ ಆಸ್ಪತ್ರೆಗೆ ದಾಖಲು, ಚಿಕಿತ್ಸೆಯಲ್ಲಿ ವಿಳಂಬ ಸೇರಿ ವಿವಿಧ ಕಾರಣಗಳಿಂದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಕ್ಯಾನ್ಸರ್ ಮರಣ ಪ್ರಕರಣಗಳು ಹೆಚ್ಚಳವಾಗಿವೆ.
ವಿವಿಧ ಪ್ರಕಾರಗಳ ಕ್ಯಾನ್ಸರ್ ಚಿಕಿತ್ಸೆಗೆ ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ನಗರದ ಸಂಸ್ಥೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಇಲ್ಲಿ ಪ್ರತಿವರ್ಷ 3 ಲಕ್ಷಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಂಸ್ಥೆ ಈಗ ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿದೆ.
ಇದೇ ವೇಳೆ, ಸಂಸ್ಥೆಯಲ್ಲಿ ವರದಿಯಾಗುತ್ತಿರುವ ಮರಣ ಪ್ರಕರಣಗಳು ಏರುಗತಿ ಪಡೆದಿವೆ. ಕಳೆದ ವರ್ಷ ಮರಣ ಪ್ರಕರಣಗಳು ಸಾವಿರದ ಗಡಿ ದಾಟಿವೆ. ಇನ್ನೊಂದೆಡೆ ಸಂಸ್ಥೆಯಲ್ಲಿನ ವೈದ್ಯರೇ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ವೈದ್ಯಕೀಯ ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.
ಸಂಸ್ಥೆಯ ಹಾಸಿಗೆಗಳ ಸಾಮರ್ಥ್ಯ 863 ಆಗಿದ್ದು, ಇವುಗಳಲ್ಲಿ ತುರ್ತು ನಿಗಾ ಘಟಕದ (ಐಸಿಯು) 106 ಹಾಸಿಗೆಗಳು ಸೇರಿವೆ. ಕ್ಯಾನ್ಸರ್ ತಪಾಸಣೆ, ಚಿಕಿತ್ಸೆ ಸಂಬಂಧ ನಿತ್ಯ ಸರಾಸರಿ 1,400 ಹೊರರೋಗಿಗಳು ಬರುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಸಮಸ್ಯೆ ಗಂಭೀರವಾಗಿದೆ. ರೋಗಿಗಳು ಅಲೆದಾಟ ನಡೆಸಬೇಕಾಗಿದೆ. ಶಿಫಾರಸು ಆಧಾರದಲ್ಲಿ ಕೂಡ ದಾಖಲಾತಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ವಿವಿಧ ಜಿಲ್ಲೆಗಳಿಂದ ಬರುತ್ತಿದ್ದು, ಚಿಕಿತ್ಸೆಯಲ್ಲಿ ವ್ಯತ್ಯಯವಾಗುತ್ತಿದೆ.
ವ್ಯವಸ್ಥೆ ಬಗ್ಗೆ ದೂರು: ಮೂಲಸೌಕರ್ಯ, ಸಿಬ್ಬಂದಿ ಕೊರತೆ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಸಂಸ್ಥೆ ವೈದ್ಯರೇ 2023ರ ಸೆಪ್ಟೆಂಬರ್
ನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ನಾಲ್ಕು ಪುಟಗಳ ದೂರಿನಲ್ಲಿ ರೋಗಿಗಳಿಗೆ ಕಳಪೆ ಗುಣಮಟ್ಟದ ಚಿಕಿತ್ಸೆ, ಔಷಧಗಳ ಕೊರತೆಯ ಬಗ್ಗೆಯೂ ಪ್ರಸ್ತಾಪಿಸಿದ್ದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ಐಎಎಸ್ ಅಧಿಕಾರಿ ಅರುಂಧತಿ ಚಂದ್ರಶೇಖರ್ ಅಧ್ಯಕ್ಷತೆಯ ಸಮಿತಿ ತನಿಖೆ ನಡೆಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
‘ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಸಂಸ್ಥೆಯ ವೈದ್ಯರು, ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆದರೆ, ಸೌಲಭ್ಯ ಮತ್ತು ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಪೆಟ್ ಸ್ಕ್ಯಾನ್ ಸೇರಿ ವಿವಿಧ ಸೇವೆಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಬೇಸರಗೊಂಡು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿತ್ತು. ಆದಷ್ಟು ಬೇಗ ತನಿಖಾ ವರದಿ ಬಹಿರಂಗಪಡಿಸಿ, ವ್ಯವಸ್ಥೆ ಸುಧಾರಣೆಗೆ ಕ್ರಮವಹಿಸಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಂಸ್ಥೆಯ ವೈದ್ಯರೊಬ್ಬರು ತಿಳಿಸಿದರು.
ಕ್ಯಾನ್ಸರ್ ಪೀಡಿತರು ಅಂತಿಮ ಹಂತದಲ್ಲಿ ಬಂದಾಗ ಉಳಿಸಿಕೊಳ್ಳುವುದು ಕಷ್ಟ. ಖಾಸಗಿ ಆಸ್ಪತ್ರೆಗಳು ಕೈಚೆಲ್ಲಿದಾಗ ಕೆಲವರು ಉಪಶಾಮಕ ಚಿಕಿತ್ಸೆಗೆ ಇಲ್ಲಿಗೆ ಬರುತ್ತಾರೆ.-ಡಾ.ವಿ.ಲೋಕೇಶ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ
3–4ನೇ ಹಂತದಲ್ಲಿ ದಾಖಲು
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ದಾಖಲಾತಿ ಪ್ರಕಾರ ಶೇ 50 ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬರುತ್ತಿದ್ದಾರೆ. ಶೇ 14.3 ರಷ್ಟು ಮಂದಿಗೆ ಮಾತ್ರ ಮೊದಲ ಹಾಗೂ ಎರಡನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಸಂಸ್ಥೆಯ ವಿಶ್ಲೇಷಣೆ ಪ್ರಕಾರ ಕ್ಯಾನ್ಸರ್ ಹೊಸ ಪ್ರಕರಣಗಳ ಸಂಖ್ಯೆಯೂ ಏರುಗತಿ ಪಡೆದಿದೆ. ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಪೇಟ್ ಬಾಯಿ ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಸ್ತನ ಮತ್ತು ಗರ್ಭಕಂಠದ ಗರ್ಭಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.