ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಟೆಂಡರ್ ಸೇರಿ ವಿವಿಧ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ತಂಡ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಸಂಸ್ಥೆಯು ಪೆಟ್ ಸ್ಕ್ಯಾನ್ ಟೆಂಡರ್ ಅನ್ನು ಬೆಂಗಳೂರು ಮೆಡಿಕಲ್ ಸಿಸ್ಟಮ್ಸ್ (ಬಿಎಂಎಸ್) ಸಂಸ್ಥೆಗೆ ಕಾರ್ಯಾದೇಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಅಧಿಕಾರಕ್ಕೆ ಮುನ್ನವೇ ಕಾರ್ಯಾದೇಶ!’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ ಆ.17ರಂದು ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಸಂಸ್ಥೆಯಲ್ಲಿನ ವೈದ್ಯರು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಾಲ್ಕು ಪುಟಗಳ ವರದಿ ಸಹಿತ ದೂರು ನೀಡಿ, ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಇದರಿಂದಾಗಿ ಸೂಕ್ತ ತನಿಖೆ ನಡೆಸಿ, ವರದಿ ನೀಡುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ, ಟೆಂಡರ್‌ಗಳು ಹಾಗೂ ಔಷಧಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ, ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಸಹಕಾರ ಇಲಾಖೆಯ ಒಬ್ಬ ಅಧಿಕಾರಿ ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡವನ್ನು ಕೂಡಲೇ ರಚಿಸಿ, ಎರಡು ವಾರಗಳ ಒಳಗೆ ಪಾರದರ್ಶಕ ವರದಿಯನ್ನು ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.