ADVERTISEMENT

ಕಿದ್ವಾಯಿ: ಕ್ಯಾನ್ಸರ್ ಪೀಡಿತ ಬಾಲಕಿಗೆ ಅಸ್ಥಿಮಜ್ಜೆ ಕಸಿ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:56 IST
Last Updated 26 ಜುಲೈ 2024, 15:56 IST
ಅಸ್ಥಿ ಮಜ್ಜೆ ಕಸಿಗೆ ಒಳಗಾದ ಬಾಲಕಿಯೊಂದಿಗೆ ಡಾ.ಶರಣ ಪ್ರಕಾಶ್ ಪಾಟೀಲ, ಸಂಸ್ಥೆಯ ಆಡಳಿತಾಧಿಕಾರಿ ಎನ್.ಮಂಜುಶ್ರೀ ಹಾಗೂ ವೈದ್ಯರು ಉಪಸ್ಥಿತರಿದ್ದಾರೆ.
ಅಸ್ಥಿ ಮಜ್ಜೆ ಕಸಿಗೆ ಒಳಗಾದ ಬಾಲಕಿಯೊಂದಿಗೆ ಡಾ.ಶರಣ ಪ್ರಕಾಶ್ ಪಾಟೀಲ, ಸಂಸ್ಥೆಯ ಆಡಳಿತಾಧಿಕಾರಿ ಎನ್.ಮಂಜುಶ್ರೀ ಹಾಗೂ ವೈದ್ಯರು ಉಪಸ್ಥಿತರಿದ್ದಾರೆ.   

ಬೆಂಗಳೂರು: ರಕ್ತದ ಕ್ಯಾನ್ಸರ್‌ನಿಂದ (ಲ್ಯುಕೇಮಿಯಾ) ಬಳಲುತ್ತಿದ್ದ 14 ವರ್ಷದ ಬಾಲಕಿಯೊಬ್ಬಳಿಗೆ ಇಲ್ಲಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆಸಲಾದ ಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಕಸಿ ಯಶಸ್ವಿಯಾಗಿದೆ.

ಸಂಸ್ಥೆಯ ಬೋನ್‌ ಮ್ಯಾರೊ ಘಟಕಕ್ಕೆ (ಬಿಎಂಟಿ) ಶುಕ್ರವಾರ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ, ಕಸಿಗೆ ಒಳಗಾದ ಬಾಲಕಿಯ ಆರೋಗ್ಯ ವಿಚಾರಿಸಿದರು. ಸಂಸ್ಥೆಯ ನೂತನ ಘಟಕದಲ್ಲಿ ನಡೆದ ಪ್ರಥಮ ಯಶಸ್ವಿ ಶಸ್ತ್ರಚಿಕಿತ್ಸೆ ಇದಾಗಿದ್ದು, ಸಚಿವರು ವೈದ್ಯರ ಕಾರ್ಯಕ್ಕೆ ಶ್ಲಾಘಿಸಿದರು.

ಎರಡು ತಿಂಗಳ ಹಿಂದೆ ಸಂಸ್ಥೆಯ ಬೋನ್‌ ಮ್ಯಾರೊ ಘಟಕಕ್ಕೆ ಚಿಕಿತ್ಸೆಗೆ ದಾಖಲಾಗಿದ್ದ ಬಾಲಕಿಗೆ, ಆಕೆಯ ಕಿರಿಯ ಸಹೋದರನ ರಕ್ತದ ಆಕರ ಕೋಶ ಬಳಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬಾಲಕಿಯ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರಿಂದ ಇಎಸ್‌ಐ ಯೋಜನೆ ಅಡಿ ಉಚಿತವಾಗಿ ಚಿಕಿತ್ಸೆ ಒದಗಿಸಲಾಗಿದೆ. ಬಿಎಂಟಿ ಮಕ್ಕಳ ವೈದ್ಯೆ ಡಾ.ವಸುಂಧರಾ ಕೈಲಾಸನಾಥ್ ನೇತೃತ್ವದ ವೈದ್ಯರ ತಂಡ ಈ ಕಸಿ ನಡೆಸಿದೆ.

ADVERTISEMENT

‘ಬಾಲಕಿ ಈಗ ಚೇತರಿಸಿಕೊಂಡಿದ್ದು, ಶೀಘ್ರದಲ್ಲಿಯೇ ಮನೆಗೆ ತೆರಳುತ್ತಾಳೆ’ ಎಂದು ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.

ಸಂಸ್ಥೆಯ ಘಟಕವು ಈವರೆಗೆ ವಯಸ್ಕರು ಸೇರಿದಂತೆ 90 ಮಂದಿಗೆ ಅಸ್ಥಿಮಜ್ಜೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.