ADVERTISEMENT

ಅಕ್ಟೋಬರ್‌ನಲ್ಲಿ 722 ಟನ್ ಸಿಹಿ ಉತ್ಪನ್ನ ಮಾರಾಟ ಮಾಡಿದ ಕೆಎಂಎಫ್‌

ಕೆಎಂಎಫ್‌: ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 0:24 IST
Last Updated 10 ನವೆಂಬರ್ 2024, 0:24 IST
ನಂದಿನಿ ಉತ್ಪನ್ನಗಳು
ನಂದಿನಿ ಉತ್ಪನ್ನಗಳು   

ಬೆಂಗಳೂರು: ಮಾರಾಟದಲ್ಲಿ ಹೊಸ ಪ್ರಯತ್ನ, ಸಿಬ್ಬಂದಿ ಪರಿಶ್ರಮ, ದಸರಾ, ದೀಪಾವಳಿ ಹಬ್ಬಗಳ ಪರಿಣಾಮವಾಗಿ ಅಕ್ಟೋಬರ್‌ ತಿಂಗಳೊಂದರಲ್ಲೇ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ನ ಸಿಹಿ ಉತ್ಪನ್ನಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ.

ಈ ವರ್ಷಾರಂಭದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ, ಕೆಎಂಎಫ್ 16.5 ಲಕ್ಷ ಲೀಟರ್ ಮೊಸರು ಮತ್ತು 51 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿತ್ತು. ಈಗ ದಸರಾ–ದೀಪಾವಳಿ ಸಮಯದಲ್ಲಿ ಸಿಹಿ ಉತ್ಪನ್ನಗಳೂ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ.

‘ಅಕ್ಟೋಬರ್ ತಿಂಗಳಲ್ಲಿ 722 ಟನ್‌ನಷ್ಟು ನಂದಿನಿ ಸಿಹಿ ತಿನಿಸುಗಳು ಮಾರಾಟವಾಗಿವೆ. ಇದು ಕೆಎಂಎಫ್‌ನ ಐತಿಹಾಸಿಕ ದಾಖಲೆಯಾಗಿದೆ’ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

ಕಳೆದ ವರ್ಷ ಇದೇ ದಸರಾ– ದೀಪಾವಳಿ ಹಬ್ಬದ ಸಮಯದಲ್ಲೂ 400 ಟನ್‌ನಷ್ಟು ಸಿಹಿ ಉತ್ಪನ್ನಗಳು ಮಾರಾಟವಾಗಿದ್ದವು. ಈ ವರ್ಷ ಅದು ದುಪ್ಪಟ್ಟಾಗಿದೆ.

‘ಈ ವರ್ಷ ನಮ್ಮ ಸಿಬ್ಬಂದಿ ನಾಲ್ಕೈದು ತಿಂಗಳಿಗೂ ಮುನ್ನವೇ ದೊಡ್ಡ ದೊಡ್ಡ ಕೈಗಾರಿಕೆಗಳು ಮತ್ತು ಕಂಪನಿಗಳನ್ನು ಸಂಪರ್ಕಿಸಿ ನಂದಿನಿ ಸಿಹಿ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಕಂಪನಿಗಳು ನಮ್ಮ ಪ್ರಸ್ತಾವನೆ ಒಪ್ಪಿ, ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸಿದ್ದವು. ಕಂಪನಿಯವರ ಬೇಡಿಕೆಗೆ ಅನುಸಾರ ಉತ್ಪನ್ನಗಳನ್ನು ಪೂರೈಸಿದೆವು. ಕಂಪನಿಯೊಂದು 35 ಟನ್‌ ಮೈಸೂರ್ ಪಾಕ್ ಖರೀದಿಸಿತು’ ಎಂದು ಜಗದೀಶ್ ವಿವರಿಸಿದರು.

‘ಸಾಮಾನ್ಯವಾಗಿ, ಉತ್ಪನ್ನಗಳನ್ನು ಪ್ರತ್ಯೇಕ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದೆವು. ಕಂಪನಿಗಳ ಬೇಡಿಕೆ ಹಾಗೂ ಹೊಸ ಪ್ರಯತ್ನವಾಗಿ ಇದೇ ಮೊದಲ ಬಾರಿಗೆ‌ ನಂದಿನಿಯ ಎಲ್ಲ ಸಿಹಿ ಉತ್ಪನ್ನಗಳನ್ನು ಮಿಶ್ರಮಾಡಿ ಪ್ಯಾಕೆಟ್ ಮಾಡಿದ್ದೆವು. ಅದು ಯಶಸ್ವಿಯೂ ಆಯಿತು’ ಎಂದು ಅವರು ತಿಳಿಸಿದರು.

‘ಹಬ್ಬದ ವೇಳೆಯಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ, ಗ್ರಾಹಕರಿಗೆ ನಂದಿನಿ ಸಿಹಿ ಉತ್ಪನ್ನಗಳನ್ನೇ ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ಬಹಳಷ್ಟು ಮಂದಿ ಮಿಶ್ರ ಸಿಹಿ ತಿನಿಸುಗಳ ಪೊಟ್ಟಣವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸದ್ಯ ನಂದಿನಿ ಬ್ರ್ಯಾಂಡ್‌ನಲ್ಲಿ 30 ವಿಧದ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇವುಗಳಲ್ಲಿ ಮೈಸೂರ್ ಪಾಕ್‌ ಅತಿ ಹೆಚ್ಚು ಬೇಡಿಕೆಯ ಉತ್ಪನ್ನ. ಇದರ ಜೊತೆಗೆ, ಪೇಡಾ, ಬರ್ಫಿ ಮತ್ತು ಲಾಡುಗಳು ಕೂಡ ಬಹಳ ಜನಪ್ರಿಯವಾಗಿವೆ. ಈ ಬಾರಿಯ ದೀಪಾವಳಿಯಲ್ಲಿ ಮೈಸೂರ್ ಪಾಕ್‌ ಹಾಗೂ ಪೇಡಾ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ ಎಂದು ಅವರು ಹೇಳಿದರು.

ಅಕ್ಟೋಬರ್ ತಿಂಗಳಲ್ಲಿ ಒಟ್ಟು ಉತ್ಪನ್ನಗಳ ವಹಿವಾಟು ₹ 175 ಕೋಟಿಯಷ್ಟಾಗಿದೆ. ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ₹151 ಕೋಟಿ ವಹಿವಾಟು ನಡೆಸಿತ್ತು. ಹಾಗಾಗಿ ಇದೊಂದು ಐತಿಹಾಸಿಕ ದಾಖಲೆಯ ವಹಿವಾಟು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಸೆ ಇಡ್ಲಿ ಹಿಟ್ಟು ಶೀಘ್ರ ಬಿಡುಗಡೆ

ನಂದಿನಿ ಬ್ರ್ಯಾಂಡ್‌ನ ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟು ಸಿದ್ದವಾಗಿದ್ದು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ ಕೆಎಂಎಫ್‌ ರಾಗಿ ಅಂಬಲಿ ಮತ್ತು ಪ್ರೊಬಯಾಟಿಕ್ ಮೊಸರನ್ನು ಈ ವರ್ಷದ ಆರಂಭದಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಸದ್ಯ ಈ ಎರಡು ಉತ್ಪನ್ನಗಳನ್ನು ಮೈಸೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ವರ್ಷ ಬೇಸಿಗೆ ವೇಳೆಗೆ ಬೆಂಗಳೂರಿನಲ್ಲಿಯೂ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.