ADVERTISEMENT

ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪ ಪೂರೈಕೆ ವಿಚಾರ: ಟಿಟಿಡಿಗೆ ಪತ್ರ ಬರೆದ ಕೆಎಂಎಫ್

ತಿರುಪತಿ ತಿರುಮಲ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 22:30 IST
Last Updated 4 ಆಗಸ್ಟ್ 2023, 22:30 IST
ನಂದಿನಿ ಶುದ್ಧ ತುಪ್ಪ
ನಂದಿನಿ ಶುದ್ಧ ತುಪ್ಪ   

ಬೆಂಗಳೂರು: ‘ಹಿಂದಿನಂತೆಯೇ ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪ ಪೂರೈಸಲು ಉತ್ಸುಕವಾಗಿದ್ದೇವೆ’ ಎಂದು ಹೇಳಿ ಟಿಟಿಡಿ ಆಡಳಿತ ಮಂಡಳಿಗೆ ಕೆಎಂಎಫ್ ಅಧಿಕಾರಿಗಳು ಪತ್ರ ಬರೆದಿದ್ದಾರೆ. ದರದ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಭೆ ಆಯೋಜಿಸುವಂತೆ ಪತ್ರದಲ್ಲಿ ಕೋರಿದ್ದಾರೆ.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ.

‘ಒಕ್ಕೂಟ ಪ್ರತಿ ವರ್ಷ 30 ಸಾವಿರ ಮೆಟ್ರಿಕ್ ಟನ್ ತುಪ್ಪ ಉತ್ಪಾದಿಸುತ್ತಿದೆ. ಕಳೆದ 20 ವರ್ಷಗಳಿಂದ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಗೆ ಗುಣಮಟ್ಟದ ತುಪ್ಪ ಪೂರೈಸಿದ್ದು, ಲಡ್ಡುವಿನ ಸ್ವಾದ ಮತ್ತು ರುಚಿ ಉತ್ತಮವಾಗಿದೆ. ಗುಣಮಟ್ಟದ ತುಪ್ಪವನ್ನು ಟಿಟಿಡಿಗೆ ಕಡಿಮೆ ದರಕ್ಕೆ ಸರಬರಾಜು ಮಾಡುವುದು ಕಷ್ಟವಾಗಿದೆ. ಆದ್ದರಿಂದ, ಸಭೆ ಕರೆದು ದರ ಮತ್ತು ಸರಬರಾಜು ವೆಚ್ಚದ ಬಗ್ಗೆ ಪರಸ್ಪರ ಚರ್ಚಿಸಿ ಒಪ್ಪಂದಕ್ಕೆ ಬರಬಹುದು. ನಮ್ಮ ದರಕ್ಕೆ ಒಪ್ಪಿದರೆ ಸರಬರಾಜು ಮಾಡುತ್ತೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಟಿಟಿಡಿಯ ಟೆಂಡರ್‌ಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ದರದ ಬಿಡ್ಡಿಂಗ್ ಮಾಡಲಾಗುತ್ತಿದೆ. ಕೆಲವು ಕಂಪನಿಗಳು ಕಡಿಮೆ ಬೆಲೆಗೆ ತುಪ್ಪ ನೀಡಲು ಮುಂದಾಗಿವೆ. ಆ ಕಂಪನಿಗಳ ತುಪ್ಪದ ದರಕ್ಕೆ ಹೋಲಿಸಿದರೆ ನಂದಿನಿ ತುಪ್ಪದ ದರ ಹೆಚ್ಚಿದೆ. ಕೆಎಂಎಫ್ ಸಹಕಾರ ಸಂಸ್ಥೆಯಾಗಿದ್ದು, ತುಪ್ಪದ ಉತ್ಪಾದನಾ ವೆಚ್ಚವನ್ನು ಮರು ಪಡೆಯಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಟಿಟಿಡಿಯ ಸ್ಪರ್ಧಾತ್ಮಕ ಟೆಂಡರ್‌ಗಳಲ್ಲಿ ಭಾಗಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

’ಹಾಲು ಉತ್ಪಾದನೆಯಲ್ಲಿ ಅತ್ಯುನ್ನತ ಸಂಸ್ಥೆಯಾಗಿರುವ ಕೆಎಂಎಫ್ ಮತ್ತು ಅದಕ್ಕೆ ಸಂಯೋಜಿತವಾಗಿರುವ ಹಾಲು ಒಕ್ಕೂಟಗಳು ದಿನಕ್ಕೆ ಸರಾಸರಿ 86 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿವೆ. ಕೆಎಂಎಫ್ ರೈತರ ಸಹಕಾರಿ ಒಕ್ಕೂಟವಾಗಿದೆ. ರೈತರೂ ಸೇರಿದಂತೆ ಸಂಸ್ಥೆಯನ್ನು ಬಲಪಡಿಸಬೇಕಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.