ಬೆಂಗಳೂರು: ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ ದಿನಪತ್ರಿಕೆಗಳ ಸ್ಥಾಪಕರಾದ ಕೆ.ಎನ್. ಗುರುಸ್ವಾಮಿ ಅವರ ನೆನಪಿನ ಸಂಜೆ ಕಾರ್ಯಕ್ರಮವು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಇದೇ 19ರಂದು (ಸೋಮವಾರ) ಸಂಜೆ 6.30ಕ್ಕೆ ನಡೆಯಲಿದೆ. ಗುರುಸ್ವಾಮಿ ಅವರ ಮೊಮ್ಮಗ ಕೆ.ಎನ್. ಹರಿಕುಮಾರ್ ಅವರು ಬರೆದಿರುವ ‘ಗ್ರ್ಯಾಂಡ್‌ಫಾದರ್ ಅಂಡ್ ಗ್ರ್ಯಾಂಡ್‌ಮದರ್: ಎ ಮೆಮೊರ್’ ಕೃತಿಯನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್, ಪತ್ರಕರ್ತ, ವಕೀಲ ಪಿ.ಜಿ. ಬೆಳ್ಳಿಯಪ್ಪ, ಲೇಖಕಿ, ಇತಿಹಾಸ ತಜ್ಞೆ ಜಾನಕಿ ನಯರ್ ಮಾತನಾಡಲಿದ್ದಾರೆ.
ರಾವ್ ಬಹದ್ದೂರ್ ಕಣೇಕಲ್ ನೆಟ್ಟಕಲ್ಲಪ್ಪ ಅವರ ಕಿರಿಯ ಪುತ್ರರಾಗಿದ್ದ ಗುರುಸ್ವಾಮಿ ಅವರು (1901–1990), ಇಡೀ ನಾಡು ಹೆಮ್ಮೆ ಪಡುವಂತಹ ಮಾಧ್ಯಮ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು. ಅವರು ಸ್ಥಾಪಿಸಿದ ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ ಎರಡೂ ಪತ್ರಿಕೆಗಳು ಈಗ 75ರ ಸಂಭ್ರಮದಲ್ಲಿವೆ.
ಪತ್ರಿಕೋದ್ಯಮಿಯಾಗಿಯೇ ಗುರುತಿಸಿಕೊಂಡ ಗುರುಸ್ವಾಮಿ ಅವರು, ಈಡಿಗ ಸಮುದಾಯದ ಸಮಾಜೋ–ಆರ್ಥಿಕ ಮತ್ತು ರಾಜಕೀಯ ಉನ್ನತಿಗಾಗಿ ಆ ಸಮುದಾಯವನ್ನು ಸಂಘಟಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಸದಾ ಧರಿಸುತ್ತಿದ್ದ ಬಿಳಿಬಣ್ಣದ ಕಚ್ಚೆ ಪಂಚೆ ಮತ್ತು ಕ್ಲೋಸ್ಡ್ ಕಾಲರ್ ಕೋಟ್, ತಲೆಯ ಮೇಲೆ ಸುತ್ತಿಕೊಳ್ಳುತ್ತಿದ್ದ ಬಿಳಿಬಣ್ಣದ ದೊಡ್ಡ ಗಾತ್ರದ ರುಮಾಲು, ಕಪ್ಪುಬಣ್ಣದ ಮೊಂಟ್‌ಬ್ಲಾಂಕ್ ಪೆನ್ನು ಮತ್ತು ಕಪ್ಪುಬಣ್ಣದ ಉದ್ದನೆಯ ಕ್ಯಾಡಿಲಾಕ್ ಕಾರು- ಅವರ ಹೆಗ್ಗುರುತುಗಳೇ ಆಗಿದ್ದವು. ಒಂದು ವೈವಿಧ್ಯಮಯ ವೈಭವದ ಹಾಗೂ ಸಾರ್ಥಕ ಜೀವನವನ್ನು ಬದುಕಿದರು ಅವರು. ಎಲ್ಲ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ ಬೆಳೆದ ವ್ಯಕ್ತಿತ್ವ ಅವರದ್ದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.