ADVERTISEMENT

ವಿಧಾನಸೌಧದ ಮಹಿಳಾ ಉದ್ಯೋಗಿ ಬ್ಯಾಗ್‌ನಲ್ಲಿ ಚಾಕು ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 16:22 IST
Last Updated 10 ಜುಲೈ 2023, 16:22 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ವಿಧಾನಸೌಧದ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಉದ್ಯೋಗಿ ಒಬ್ಬರ ಬ್ಯಾಗ್‌ನಲ್ಲಿ ಸಣ್ಣ ಚಾಕು ಪತ್ತೆಯಾಗಿದ್ದು, ಅದನ್ನು ಭದ್ರತಾ ಸಿಬ್ಬಂದಿ ಜಪ್ತಿ ಮಾಡಿಕೊಂಡಿದ್ದಾರೆ.

ವಿಧಾನಸೌಧದ ಪೂರ್ವ ಗೇಟ್‌ನಲ್ಲಿ ಅಳವಡಿಸಿದ್ದ ಸ್ಕ್ಯಾನರ್‌ನಲ್ಲಿ ಬ್ಯಾಗ್‌ ಅನ್ನು ಪರಿಶೀಲನೆ ನಡೆಸುವ ವೇಳೆ ಬ್ಯಾಗ್‌ನಲ್ಲಿ ಚಾಕು ಇರುವುದು ಕಂಡುಬಂದಿದೆ. ಕೆಲವು ನಿಮಿಷಗಳ ಕಾಲ ಮಹಿಳಾ ಉದ್ಯೋಗಿಯನ್ನು ತಡೆದು ನಿಲ್ಲಿಸಲಾಗಿತ್ತು.

‘ಮಹಿಳಾ ಉದ್ಯೋಗಿಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಸೇಬು ಕತ್ತರಿಸಲು ಮನೆಯಿಂದ ಚಾಕೊಂದನ್ನು ಅವರು ಕೊಂಡೊಯ್ದಿದ್ದರು. ಆಸ್ಪತ್ರೆಯಿಂದ ಕಚೇರಿಗೆ ನೇರವಾಗಿ ಬಂದ ಕಾರಣಕ್ಕೆ ಆ ಚಾಕು ಬ್ಯಾಗ್‌ನಲ್ಲೇ ಇತ್ತು. ಈ ವಿಷಯವನ್ನು ಸಹೋದ್ಯೋಗಿಗಳೂ ಭದ್ರತಾ ಸಿಬ್ಬಂದಿಗೆ ತಿಳಿಸಿದ ಮೇಲೆ ಕಚೇರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು’ ಎಂದು ಮೂಲಗಳು ಹೇಳಿವೆ.

ADVERTISEMENT

ಜುಲೈ 7ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದ ವೇಳೆ ಚಿತ್ರದುರ್ಗದ ತಿಪ್ಪೇರುದ್ರಪ್ಪ ಎಂಬುವವರು ಮೊಳಕಾಲ್ಮುರು ಕ್ಷೇತ್ರದ ಶಾಸಕ ಎಂದು ಹೇಳಿಕೊಂಡು ವಿಧಾನಸೌಧದ ಒಳಗೆ ಪ್ರವೇಶಿಸಿ ಶಾಸಕರ ಕುರ್ಚಿಯ ಮೇಲೆ ಕುಳಿತ್ತಿದ್ದರು. ಅವರನ್ನು ಮಾರ್ಷಲ್‌ಗಳು ಹಿಡಿದು, ಠಾಣೆಗೆ ಒಪ್ಪಿಸಿದ್ದರು. ಅದಾದ ಮೇಲೆ ವಿಧಾನಸೌಧ ಪ್ರವೇಶ ದ್ವಾರದಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಎಲ್ಲರನ್ನೂ ತಪಾಸಣೆ ಮಾಡಿಯೇ ಒಳಕ್ಕೆ ಬಿಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.