ನೆಲಮಂಗಲ: ಕೃಷಿಯೋಗ್ಯ ಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ಭೂ ಸ್ವಾಧೀನ ಮಾಡಿಕೊಳ್ಳುವುದನ್ನು ತಡೆಯುವಂತೆ ತಾಲ್ಲೂಕಿನ ಕೊಡಿಗೆಹಳ್ಳಿ ರೈತರು, ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದ್ದಾರೆ.
ತಾಲ್ಲೂಕಿನ ಕೊಡಿಗೆಹಳ್ಳಿ, ಕೆಂಚನಪುರ, ಬಳ್ಳಗೆರೆ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಕೃಷಿ ಭೂಮಿ ಫಲವತ್ತಾಗಿದೆ. ತಕ್ಕಮಟ್ಟಿಗೆ ನೀರಿನ ಸೌಲಭ್ಯಗಳನ್ನು ಬಳಸಿಕೊಂಡು ರೈತರು ತರಕಾರಿ ಬೆಳೆಯುತ್ತಾ, ಹೈನುಗಾರಿಕೆ ಮಾಡುತ್ತಾ, ನಿತ್ಯ ತುಮಕೂರು ಮತ್ತು ಬೆಂಗಳೂರಿಗೆ ತರಕಾರಿ, ಹಾಲು ಪೂರೈಸುತ್ತಿದ್ದಾರೆ. ಇಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದಾರೆ.
ಕೈಗಾರಿಕೆಗಳನ್ನು ನೆಪವಾಗಿಟ್ಟುಕೊಂಡು ರೈತರ ಜಮೀನು ಸ್ವಾಧೀನ ಪಡಿಸಿಕೊಂಡರೆ ಈ ಭಾಗದ ರೈತರನ್ನು ಒಕ್ಕಲೆಬ್ಬಿಸಿದಂತಾಗುತ್ತದೆ. ಸ್ವಾಭಿಮಾನದಿಂದ ವ್ಯವಸಾಯ ಮಾಡಿಕೊಂಡಿದ್ದ ರೈತರು ಕೂಲಿಗೆ ಹೋಗಬೇಕಾಗುತ್ತದೆ. ಸರ್ಕಾರ, ಸಣ್ಣ ಸಣ್ಣ ರೈತರನ್ನು ಭೂ ರಹಿತರನ್ನಾಗಿಸುವ ಈ ಕೆಲಸವನ್ನು ಕೈಬಿಡಬೇಕು. ಬದಲಿಗೆ ಸುಸ್ಥಿರ ಕೃಷಿಯ ಕೈಗೊಳ್ಳಲು ರೈತರಿಗೆ ತಾಂತ್ರಿಕ ಮಾರ್ಗದರ್ಶನ ನೀಡಬೇಕು. ರೈತರ ಹಿತ ಕಾಪಾಡಬೇಕು ಎಂದು ಮನವಿಯಲ್ಲಿ ಕೇಳಿಕೊಂಡಿದ್ದಾರೆ.
ಗ್ರಾಮಸ್ಥರ ಮನವಿ ಆಧರಿಸಿ, ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿಯ ಸದಸ್ಯರು, ಸರ್ವಸದಸ್ಯರ ಸಭೆಯಲ್ಲಿ ನಡವಳಿ ತಯಾರಿಸಿ ತಹಶೀಲ್ದಾರ್, ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಕೋರಿದೆ.
ಈಗಾಗಲೇ ಓಬಳಾಪುರ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದರೂ, ಅಲ್ಲಿ ಇನ್ನೂ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ. ಕೊಡಿಗೆಹಳ್ಳಿ ಸುತ್ತಮುತ್ತ ಭೂಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವ ಇರುವ ಮಾಹಿತಿ ಹರಿದಾಡುತ್ತಿದೆ. ಇದು ರೈತರಲ್ಲಿ ಆತಂಕ ಮೂಡಿದೆ.
‘ಈ ಸ್ವಾಧೀನ ಪ್ರಕ್ರಿಯೆ ಮುಂದುವರಿದರೆ ಜನರ ಆರೋಗ್ಯ, ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಕೈಗಾರಿಕೆ ಸ್ಥಾಪಿಸಲು ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಿ’ ಎಂದು ಸ್ಥಳೀಯ ವಿಜ್ಞಾನಿ ಜಿ.ಬೈರೇಗೌಡ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.