ADVERTISEMENT

MGNREGA:ಗ್ರಾಮ ಪಂಚಾಯಿತಿಗಳಿಗೆ ಭಾರವಾದ ಕೂಲಿಗೆ ಬರುವ ತಾಯಂದಿರ ಮಕ್ಕಳ ಕೂಸಿನ ಮನೆ

* ಪಂಚಾಯಿತಿಗಳ ಅನುದಾನ ಬಳಕೆಗೆ ವಿರೋಧ * ಯೋಜನೆಯ ಸ್ವರೂಪ ಬದಲಿಸಲು ಆಗ್ರಹ

ಸುಬ್ರಹ್ಮಣ್ಯ ವಿ.ಎಸ್‌.
Published 7 ಫೆಬ್ರುವರಿ 2024, 2:37 IST
Last Updated 7 ಫೆಬ್ರುವರಿ 2024, 2:37 IST
<div class="paragraphs"><p>ನರೇಗಾ ಕಾಮಗಾರಿಯಲ್ಲಿ ತೊಡಗಿಸಿಕೊಂಡ ಮಹಿಳೆಯರು</p></div>

ನರೇಗಾ ಕಾಮಗಾರಿಯಲ್ಲಿ ತೊಡಗಿಸಿಕೊಂಡ ಮಹಿಳೆಯರು

   

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗ) ಕೂಲಿಗೆ ಬರುವ ತಾಯಂದಿರ ಎಳೆಯ ಮಕ್ಕಳ ಆರೈಕೆಗಾಗಿ ಜಾರಿಗೊಳಿಸಿರುವ ‘ಕೂಸಿನ ಮನೆ’ ಯೋಜನೆಯ ಆಡಳಿತಾತ್ಮಕ ಮತ್ತು ಆರ್ಥಿಕ ಭಾರ ಹೊರಲು ಗ್ರಾಮ ಪಂಚಾಯಿತಿಗಳು ಹಿಂದೇಟು ಹಾಕುತ್ತಿವೆ.

ಕೂಸಿನ ಮನೆಗಳ ನಿರ್ವಹಣೆಯ ಭಾರ ಹೊರಲು ಹಲವೆಡೆ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಉದ್ದೇಶಿತ 4,000 ಕೂಸಿನ ಮನೆಗಳ ಪೈಕಿ 2,209ಕ್ಕೆ ಮಾತ್ರ ಚಾಲನೆ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ‍ಪಂಚಾಯತ್‌ ರಾಜ್‌ ಇಲಾಖೆಗೆ ಸಾಧ್ಯವಾಗಿದೆ.

ADVERTISEMENT

ನರೇಗಾ ಕೂಲಿಗೆ ಹೆಚ್ಚಿನ ಸಂಖ್ಯೆಯ ತಾಯಂದಿರು ಬರುವ ಸ್ಥಳಗಳಲ್ಲಿ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಎಳೆಯ ಮಕ್ಕಳಿದ್ದರೆ ಸ್ಥಳದಲ್ಲೇ ಒಬ್ಬರನ್ನು ಆರೈಕೆಗಾಗಿ ನಿಯೋಜಿಸುವ ವ್ಯವಸ್ಥೆ ಯೋಜನೆಯ ನಿಯಮಗಳಲ್ಲಿದೆ. ಅದನ್ನು ಬಳಸಿಕೊಂಡ ಪಂಚಾಯತ್‌ ರಾಜ್‌ ಇಲಾಖೆ, ‘ಕೂಸಿನ ಮನೆ’ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೆ ಒಂದು ಶಿಶುಪಾಲನಾ ಕೇಂದ್ರವನ್ನು ತೆರೆಯುತ್ತಿದೆ.

ಯೋಜನೆಯ ಆರಂಭದಲ್ಲೇ ಶಿಶುಪಾಲನಾ ಕೇಂದ್ರಗಳ ನಿರ್ವಹಣೆ ಮತ್ತು ಮೇಲುಸ್ತುವಾರಿಯಲ್ಲಿ ಗೊಂದಲ ಹೆಚ್ಚಾಗಿದೆ. ಆಡಳಿತ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ಒಪ್ಪಿಸಿದ್ದು, ಮೇಲುಸ್ತುವಾರಿಯನ್ನು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಿ ಹೊಸ ಸುತ್ತೋಲೆ ಹೊರಡಿಸಲಾಗಿದೆ.

ಅನುದಾನ ಬಳಕೆಗೆ ವಿರೋಧ: 4,000 ಕೂಸಿನ ಮನೆಗಳ ನಿರ್ವಹಣೆಗೆ ವರ್ಷಕ್ಕೆ ₹160 ಕೋಟಿ ವ್ಯಯಿಸಲಾಗುತ್ತಿದೆ. ಅದರಲ್ಲಿ ತರಬೇತುದಾರರ ಗೌರವ ಧನಕ್ಕಾಗಿ ಮಾತ್ರ ನರೇಗ ಅನುದಾನದಿಂದ ₹65.72 ಕೋಟಿ ಭರಿಸಲಾಗುತ್ತಿದೆ.

ಉಳಿದ ಅನುದಾನವನ್ನು ಪಂಚಾಯಿತಿಗಳ ಅನುದಾನದಲ್ಲೇ ಭರಿಸುವಂತೆ ಇಲಾಖೆ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯಿತಿ ನಿಧಿಯಿಂದ ₹65.72 ಕೋಟಿ, ಇಲಾಖೆಯಿಂದ ಗ್ರಾಮ ಪಂಚಾಯಿತಿಗಳಿಗೆ ದೊರಕುವ ಅನುದಾನದಲ್ಲಿ ₹40 ಕೋಟಿ ಮತ್ತು ತಾಲ್ಲೂಕು ಪಂಚಾಯಿತಿಗಳ ನಿಧಿಯಿಂದ ₹3.20 ಕೋಟಿ ಭರಿಸುವಂತೆ ಇಲಾಖೆ ಆದೇಶಿಸಿದೆ.

‘ಕೂಸಿನ ಮನೆ ಯೋಜನೆಗೆ ಪಂಚಾಯಿತಿ ನಿಧಿ ಮತ್ತು ಪಂಚಾಯತ್‌ ಅನುದಾನವನ್ನೂ ಬಳಕೆ ಮಾಡಬೇಕೆಂಬುದು ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾದುದು. ಇಡೀ ಯೋಜನೆಯನ್ನು ಅವೈಜ್ಞಾನಿಕವಾಗಿ ರೂಪಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಸ್ವಾಯತ್ತೆಗೆ ವಿರುದ್ಧವಾಗಿ ಯೋಜನೆಯನ್ನು ಹೇರಿಕೆ ಮಾಡಲಾಗಿದೆ’ ಎಂದು ದೂರುತ್ತಾರೆ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್‌.

ಈ ಯೋಜನೆಗಾಗಿ ಗ್ರಾಮ ಪಂಚಾಯಿತಿಗಳ ಸ್ವಂತ ನಿಧಿ ಮತ್ತು ಅಭಿವೃದ್ಧಿ ಅನುದಾನವನ್ನು ಬಳಕೆ ಮಾಡುವಂತೆ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಯೋಜನೆಗೆ ಸಂಪೂರ್ಣವಾಗಿ ಅನುದಾನವನ್ನು ರಾಜ್ಯ ಸರ್ಕಾರವೇ ಭರಿಸುವ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯದೊಂದಿಗೆ ಹೋರಾಟ ಕೈಗೆತ್ತಿಕೊಳ್ಳಲು ಒಕ್ಕೂಟ ಸಜ್ಜಾಗುತ್ತಿದೆ.

ಪೌಷ್ಟಿಕ ಆಹಾರಕ್ಕೆ ₹12

ಕೂಸಿನ ಮನೆಗೆ ಬರುವ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ದಿನವೊಂದಕ್ಕೆ
₹ 12 ಅನುದಾನ ನಿಗದಿಪಡಿಸಲಾಗಿದೆ. ತಾಯಂದಿರಿಂದ ದೂರ ಇರುವ ಮಕ್ಕಳಿಗೆ ಈ ಮೊತ್ತದಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸಲು ಅಸಾಧ್ಯ ಎಂಬ ಚರ್ಚೆಯೂ ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳ ವಲಯದಲ್ಲಿ ನಡೆಯುತ್ತಿದೆ.

‘ಕೂಸಿನ ಮನೆ ಯೋಜನೆ ಯನ್ನು ದುಡಿಯುವ ಮಹಿಳೆಯರು ಮತ್ತು ಮಕ್ಕಳ ಅನುಕೂಲಕ್ಕಾಗಿ ಆರಂಭಿಸಲಾಗಿದೆ. ಈ ಯೋಜನೆಯನ್ನು ಗ್ರಾಮ ಪಂಚಾಯಿತಿಗಳ ಎಲ್ಲ ಸದಸ್ಯರೂ ವಿರೋಧಿಸುತ್ತಿಲ್ಲ.
ಉಮಾ ಮಹದೇವನ್‌, ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಕೆಲವು ಅಧಿಕಾರಿಗಳ ಮೂಗಿನ ನೇರಕ್ಕೆ ತಕ್ಕಂತೆ ಕೂಸಿನ ಮನೆ ಯೋಜನೆ ಯನ್ನು ರೂಪಿಸಲಾಗಿದೆ. ಈಗ ಕೂಸಿನ ಮನೆಯಿಂದ ಅನುಕೂಲಕ್ಕಿಂತ ಸಮಸ್ಯೆಯೇ ಹೆಚ್ಚು ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ.
ಯದುನಾಡು ನಾಗರಾಜ್‌, ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.